www.bantwalnews.com Editor: Harish Mambady For Advertisements Contact: 9448548127
ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ದೊರಕುವ ಅಕ್ಕಿಯ ಕುರಿತು ಗೊತ್ತೇ ಇದೆ. ಆದರೆ ನಿಯಮಾವಳಿಯನ್ನು ಕಠಿಣವಾಗಿ ಪಾಲಿಸುವ ಸಂದರ್ಭ ಕಾರ್ಡು ಅನರ್ಹವೇನಾದರೂ ಆದರೆ, ಅದಕ್ಕೆ ವಿಧಿಸುವ ದಂಡ ಹೇಗೆ?
ಬುಧವಾರ ಬಂಟ್ವಾಳ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಯು.ಟಿ.ಖಾದರ್ ಹೀಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ಬಳಸಿದ ಅಕ್ಕಿಗೆ ದಂಡ ವಿಧಿಸುತ್ತೇವೆ ಎಂದು ಉತ್ತರಿಸಿದರು. ಇಂಥದ್ದು ವಿಶ್ವದಲ್ಲೇ ಮೊದಲು ಎಂದು ಟೀಕಿಸಿದ ಖಾದರ್, ಉಚಿತವಾಗಿ ಕೊಡುವ ಅಕ್ಕಿಗೂ ದಂಡ ವಸೂಲು ಮಾಡುವ ವಿಧಾನಕ್ಕೆ ಆಕ್ಷೇಪ ಸೂಚಿಸಿದ ಘಟನೆ ನಡೆಯಿತು.
ಬಿಪಿಎಲ್ ಕಾರ್ಡು ಅನರ್ಹತೆ, ತಾಲೂಕು ಪಂಚಾಯತ್ ಸುಪರ್ದಿಯಲ್ಲಿ ಇರುವ ಜಾಗ, ತಾಪಂ ಸದಸ್ಯರು ಇನ್ನೂ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಘೋಷಣೆ ಮಾಡದಿರುವುದು, ಬಂಟ್ವಾಳ – ಸೋರ್ನಾಡು ರಸ್ತೆ ರಿಪೇರಿ, ಮುಗಿಯದ ಸರ್ವರ್ ಸಮಸ್ಯೆ, ಗ್ರಾಮಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಗಳಿಗೆ ಅಧಿಕಾರಿಗಳು ಬಾರದೇ ಇರುವ ಕುರಿತು ವಿಚಾರಗಳು ಪ್ರಸ್ತಾಪಗೊಂಡವು. ಶಿಥಿಲ ಅಂಗನವಾಡಿ, ಆಧಾರ್ ಗೊಂದಲ ಸಹಿತ ಪ್ರತಿ ಬಾರಿಯೂ ಪ್ರಸ್ತಾಪಗೊಳ್ಳುವ ಅಡಕೆ ಕೊಳೆ ರೋಗಕ್ಕೆ ಬಾರದ ಪರಿಹಾರ ವಿಚಾರಗಳು ಮಂಡನೆಯಾದವು.
ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ಉಸ್ಮಾನ್ ಕರೋಪಾಡಿ, ಹೈದರ್ ಕೈರಂಗಳ, ಆದಂ, ರಮೇಶ್ ಕುಡ್ಮೇರು, ಸಂಜೀವ ಪೂಜಾರಿ, ಗ್ರಾಪಂ ಅಧ್ಯಕ್ಷರಾದ ರಮ್ಲಾನ್, ರಾಜೇಶ್ ಬಾಳೇಕಲ್ಲು ವಿವಿಧ ವಿಷಯ ಪ್ರಸ್ತಾಪಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಉಪಸ್ಥಿತರಿದ್ದರು. ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯಿತು. ಮಲ್ಲಿಕಾ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡರು. ನಿರ್ಗಮನ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ಉಪಸ್ಥಿತರಿದ್ದರು. ಇದೇ ವೇಳೆ ಇಒ ರಾಜಣ್ಣ ತಾಪಂ ಜಾಗದ ವಿಚಾರಗಳನ್ನು ಸಭೆಗೆ ಮಂಡಿಸಿದರು.
Be the first to comment on "ಬಿಪಿಎಲ್ ಅನರ್ಹವಾದರೆ, ಬಳಸಿದ ಅಕ್ಕಿ ಆಧರಿಸಿ ದಂಡ ಯಾಕೆ? – ತಾಪಂ ಸಭೆಯಲ್ಲಿ ಖಾದರ್ ತರಾಟೆ"