ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಸಾಧನೆ ತೋರಿದ್ದು, 2019ರ ಅರ್ಧ ವರ್ಷಾಂತ್ಯಕ್ಕೆ ಉಭಯ ಜಿಲ್ಲೆಗಳ ಪಿಕಾರ್ಡ್ ಬ್ಯಾಂಕುಗಳಿಗೆ 25.33 ಕೋಟಿ ರೂ ಸಾಲ ಹಂಚಿಕೆ ಮಾಡಿದೆ ಎಂದು ಉಭಯ ಜಿಲ್ಲೆಗಳ ನಿರ್ದೇಶಕ ಸುದರ್ಶನ ಜೈನ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಮಂಗಳೂರು ಶಾಖೆ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ತಾಲೂಕಿನ ರೈತರಿಗೆ ಧೀರ್ಘಾವಧಿ ಸಾಲ ನೀಡುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದು, 2018-19ನೇ ಸಾಲಿನಲ್ಲಿ ನಬಾರ್ಡ ಪುನರ್ಧನದಡಿ 13 ಕೋಟಿ ರೂ. ಮತ್ತು ಸ್ವಂತ ಸಂಪನ್ಮೂಲದಡಿ ನಿಶ್ಚಿತ ಠೇವಣಿಯನ್ನು ಸಂಗ್ರಹಿಸಿ ಉಭಯ ಜಿಲ್ಲೆಗಳ ರೈತರುಗಳಿಗೆ ತಲಾ ದ.ಕ ಜಿಲ್ಲೆಗೆ 40 ಕೋಟಿ ರೂ ಹಾಗೂ ಉಡುಪಿ ಜಿಲ್ಲೆಗೆ 13.94 ಕೋಟಿ ರೂ ಸಾಲಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
2018-19 ನೇ ಸಾಲಿನಲ್ಲಿ ಕಸ್ಕಾರ್ಡ ಬ್ಯಾಂಕ್ ಪ್ರಧಾನ ಕಛೇರಿಯಿಂದ ದ.ಕ ಜಿಲ್ಲೆಯ ಬಂಟ್ವಾಳ ಪಿಕಾರ್ಡ ಬ್ಯಾಂಕು ಶೇ.75.71ರಷ್ಟು ಸಾಲ ವಸೂಲಾತಿ ಮಾಡಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಬೆಳ್ತಂಗಡಿ ಪಿಕಾರ್ಡ ಬ್ಯಾಂಕು ಶೇ.70.91 ರಷ್ಟು ವಸೂಲಾತಿ ಮಾಡಿ ದ್ವಿತೀಯ ಸ್ಥಾನದಲ್ಲಿರುತ್ತದೆ. ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ಪಿಕಾರ್ಡ ಬ್ಯಾಂಕುಗಳು ಶೇ.81.52 ಮತ್ತು ಶೇ.71.75 ರಷ್ಟು ಸಾಲ ವಸೂಲಾತಿ ಮಾಡಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿರುವುದಾಗಿ ತಿಳಿಸಿದರು.
ಕೃಷಿ ಮತ್ತು ಕೃಷಿಪೂರಕ ಸಾಲಗಳಿಗೆ ಶೇಕಡಾ 3ರ ರಿಯಾಯಿತಿ ಬಡ್ಡಿ ದರದಲ್ಲಿ ಸಾಲಗಳನ್ನು ನೀಡಲಾಗುತಿದ್ದು, ಒಟ್ಟು ಸಾಲ 33 ಕೋಟಿ ರೂ ಸಾಲ ವಿತರಿಸಲಾಗಿದ್ದು. ಈ ಯೋಜನೆಗಳಲ್ಲಿ ನಬಾರ್ಡ್ ವತಿಯಿಂದ ರೂ.78.78 ಲಕ್ಷ ಸಹಾಯಧನ ದೊರೆಯಲಿದೆ ಎಂದರು.
ರಾಜ್ಯ ಬ್ಯಾಂಕಿನ ಮೂಲಕ ಬರ, ಅತೀವೃಷ್ಟಿ ಹಾಗೂ ಅಡಿಕೆ ಕೊಳರೋಗ ಹಾಗೂ ಇನ್ನಿತರ ತೋಟಗಾರಿಕಾ ಬೆಳೆಗಳ ಬೆಲೆ ಕುಸಿತದ ಈಗಿನ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕುಗಳ ದೀರ್ಘಾವಧಿ ಸಾಲಗಳ ಕಂತುಗಳ ಅಸಲನ್ನು ಕಟ್ಟಿದ ರೈತರಿಗೆ ಬಡ್ಡಿ ಮನ್ನಾ ಯೋಜನೆ ಮುಂದಿನ ಮಾರ್ಚ್‌ಗೆ ಅಸಲು ಮುಂದೂಡಿಕೆಯೊಂದಿಗೆ ಬಡ್ಡಿ ಮನ್ನಾ ಯೋಜನೆ ಪ್ರಸ್ತಾವನ್ನು ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದ್ದು, ರಾಜ್ಯ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.
Be the first to comment on "ದ.ಕ, ಉಡುಪಿಯಲ್ಲಿ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಉತ್ತಮ ಸಾಧನೆ: ಸುದರ್ಶನ ಜೈನ್"