ಬಂಟ್ವಾಳ: ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಅಕ್ಟೋಬರ್ 2 ರಂದು ದಾನಿಗಳಿಂದ ಸಮರ್ಪಣೆಯಾಗಲಿರುವ ಬ್ರಹ್ಮರಥವನ್ನು ಬಿ.ಸಿ.ರೋಡಿನಲ್ಲಿ ಅಕ್ಟೋಬರ್ 1 ರಂದು ಬಂಟ್ವಾಳ ತುಳುಕೂಟ ಮತ್ತಿತರ ಸಂಘಟನೆಗಳ ವತಿಯಿಂದ ಸ್ವಾಗತಿಸಿ ಬೀಳ್ಕೊಡಲಾಗುವುದು ಎಂದು ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಮತ್ತು ಪ್ರಧಾನ ಕಾರ್ಯದರ್ಶಿ ಎಚ್ಕೆ.ನಯನಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರಕ್ಕೆ ಸಮರ್ಪಣೆಯಾಗಲಿರುವ ಬ್ರಹ್ಮರಥವು ಸೆಪ್ಪಂಬರ್ 30 ರಂದು ಬೆಳಿಗ್ಗೆ ಕೋಟೇಶ್ವರದಿಂದ ಹೊರಟು ಸಂಜೆ ಕದ್ರಿ ತಲುಪಲಿದೆ. ಅಕ್ಟೋಬರ್ 1 ರಂದು ಬೆಳಿಗ್ಗೆ 8.30ಕ್ಕೆ ಕದ್ರಿಯಿಂದ ಹೊರಡುವ ಬ್ರಹ್ಮರಥವು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಾ ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡು ತಲುಪಲಿದೆ.
ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಬಳಿ ತುಳುಕೂಟ, ತಾಲೂಕಿನ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗೂ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಬ್ರಹ್ಮರಥಕ್ಕೆ ಭವ್ಯ ಸ್ವಾಗತ ನೀಡಲಾಗುವುದು. ರಥಕ್ಕೆ ಪುಷ್ಪಾರ್ಚಣೆಯೊಂದಿಗೆ ಸ್ವಾಗತಿಸಿ ಅಲ್ಲಿಂದ ಚೆಂಡೆವಾದನ ಮತ್ತಿತರ ಸಾಂಸ್ಕ್ರತಿಕ ಪ್ರದರ್ಶನಗಳೊಂದಿಗೆ ರಾಜರಸ್ತೆಯಲ್ಲಿ ಸಾಗಿ ಬಿ.ಸಿ.ರೋಡು ವೃತ್ತ ಬಳಿ ಬ್ರಹ್ಮರಥವನ್ನು ಶ್ರೀ ಕ್ಷೇತ್ರಕ್ಕೆ ಬೀಳ್ಕೊಡಲಾಗುವುದು. ತಾಲೂಕಿನ ಎಲ್ಲಾ ಧಾರ್ಮಿಕ ಸಂಸ್ಥೆಗಳು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು ಬ್ರಹ್ಮರಥದ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್ಕೆ. ನಯನಾಡು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Be the first to comment on "ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಬ್ರಹ್ಮರಥಕ್ಕೆ ಬಿ.ಸಿ.ರೋಡಿನಲ್ಲಿ ಸ್ವಾಗತ"