www.bantwalnews.com Editor: Harish Mambady
ಬಂಟ್ವಾಳ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಲೋಕಾಯುಕ್ತ ಎಸ್ಪಿ ಮತ್ತು ತಂಡದ ಅಹವಾಲು ಸ್ವೀಕಾರ ಸಭೆ ಶನಿವಾರ ಪೊಲೀಸ್ ಅಧೀಕ್ಷಕ ಕೆ.ಎನ್. ಮಾದಯ್ಯ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಉಪಸ್ಥಿತಿಯಲ್ಲಿ ನಡೆಯಿತು.
ಪೊಲೀಸ್ ಅಧೀಕ್ಷಕ ಕೆ.ಎನ್. ಮಾದಯ್ಯ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯಪ್ರಸಾದ್, ಕಲಾವತಿ, ನಿರೀಕ್ಷಕರಾದ ಭಾರತಿ, ಸಿಬ್ಬಂದಿ ಶಶಿಧರ್, ಸುರೇಂದ್ರ, ಲೋಕೇಶ, ಪ್ರದೀಪ್, ರಾಧೇಶ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಾಪಂ ಇಒ ರಾಜಣ್ಣ, ಕಂದಾಯ ಇಲಾಖೆಯ ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಉಪತಹಶೀಲ್ದಾರ್ ಗ್ರೆಟ್ಟಾ, ಆರ್.ಐ.ಗಳಾದ ರಾಮ ಕಾಟಿಪಳ್ಳ, ನವೀನ್, ದಿವಾಕರ್, ಅರಣ್ಯಾಧಿಕಾರಿ ಬಿ.ಸುರೇಶ್, ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಷಣ್ಮುಗಂ, ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸಹಿತ ನಾನಾ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು. ದೂರುಗಳನ್ನು ನೀಡಿದರೂ ಕ್ರಮ ಕೈಗೊಳ್ಳುವುದು ವಿಳಂಬಗತಿಯಲ್ಲಿ ಸಾಗುತ್ತದೆ ಎಂದು ಸಭೆಯಲ್ಲಿದ್ದವರು ಬೇಸರ ವ್ಯಕ್ತಪಡಿಸಿದರೆ, ಸಮಸ್ಯೆಗೆ ಸ್ಪಂದಿಸಿ, ದೂರುದಾರರ ವಿಚಾರದ ತನಿಖೆಯನ್ನು ತ್ವರಿತವಾಗಿ ನೆರವೇರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಬಂಟ್ವಾಳದಲ್ಲಿ ಕೆರೆ ಜಾಗ ಒತ್ತುವರಿ, ಅಮ್ಟೂರು ಕೃಷ್ಣಾಪುರಕ್ಕೆ 1.76 ಕೋಟಿ ರೂಪಾಯಿಯ ಗ್ರಾಮ ಸಡಕ್ ರಸ್ತೆ ಇನ್ನೂ ಆಗದಿರುವುದು, ಸಜೀಪಮುನ್ನೂರು ಗ್ರಾಮದ ಪ್ರಕರಣವೊಂದಕ್ಕೆ ಸಂಬಂಧಿಸಿ 2004ನೇ ಇಸವಿಯಲ್ಲಿ ದೂರು ನೀಡಿ, ತನಿಖೆ ನಡೆದರೂ ಇನ್ನೂ ಆರೋಪ ಹೊತ್ತವರ ವಿರುದ್ಧ ಕ್ರಮ ಕೈಗೊಂಡಿಲ್ಲ, ಸಾರ್ವಜನಿಕರಿಂದ ಅಹವಾಲು ಸ್ವೀಕಾರದ ಕುರಿತು ಮಾಹಿತಿಯನ್ನು ವಾರದ ಮೊದಲೇ ಎಲ್ಲ ಸರಕಾರಿ ಕಚೇರಿಗಳ ಮುಂದೆ ಬ್ಯಾನರ್ ಕಟ್ಟುವುದರ ಮೂಲಕ ಪ್ರಚಾರ ನೀಡಬೇಕು, ಬಂಟ್ವಾಳ ಪುರಸಭೆ ವ್ಯಾಪ್ತಿಯ ಕಸ ವಿಲೇವಾರಿ, ಬಿ.ಸಿ.ರೋಡಿನ ಪಾರ್ಕಿಂಗ್ ಮತ್ತು ಗೂಡಂಗಡಿ ಸಮಸ್ಯೆಗಳು, ಪೌರ ಕಾರ್ಮಿಕರಿಗೆ ಸುರಕ್ಷಾ ಸಾಧನಗಳು ವಿತರಣೆ ಆಗದೇ ಇರುವುದು, ಕಾದಿರಿಸಿದ ಜಾಗ ದೊರಕದೇ ಇರುವುದು, ದಾಖಲೆಗಳ ಅಕ್ರಮ ತಿದ್ದುಪಡಿ ಆರೋಪ, ದೂರು ನೀಡಿದರೂ ಕ್ರಮ ಕೈಗೊಳ್ಳದೇ ಇರುವುದು ಹೀಗೆ ಹಲವು ವಿಚಾರಗಳು ಅಹವಾಲು ಆಲಿಕೆ ಸಂದರ್ಭ ವ್ಯಕ್ತವಾದವು.
ಸಾಮಾಜಿಕ ಕಾರ್ಯಕರ್ತರಾದ ಭಾನುಚಂದ್ರ ಕೃಷ್ಣಾಪುರ, ಪತ್ರಕರ್ತ ಫಾರೂಕ್ ಬಂಟ್ವಾಳ, ರೈತಮುಖಂಡ ಬಿ.ಕೆ.ಇದಿನಬ್ಬ, ಜನಾರ್ದನ, ರಾಜ ಪಲ್ಲಮಜಲು, ಹಾರೂನ್ ರಶೀದ್ ಸಹಿತ ಹಲವರು ಮಾತನಾಡಿದರು. ಸುಮಾರು 25ಕ್ಕೂ ಅಧಿಕ ದೂರುಗಳು ಅಹವಾಲು ಸ್ವೀಕಾರ ಸಂದರ್ಭ ದಾಖಲಾದವು.
Be the first to comment on "ನೀಡಿದ ದೂರುಗಳ ಶೀಘ್ರ ವಿಲೇವಾರಿ – ಲೋಕಾಯುಕ್ತ ಎಸ್ಪಿ ಮುಂದೆ ಸಾರ್ವಜನಿಕರ ಮನವಿ"