ಮುಳುಗುವ ಜಾಗದಲ್ಲಿ ಮನೆ ಕಟ್ಟಲು ಪರ್ಮಿಶನ್ ಬೇಡ – ಬಂಟ್ವಾಳ ಶಾಸಕ ಸೂಚನೆ

ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುವ ಸಂದರ್ಭ ಮುಳುಗಡೆಯಾಗುವ ಪ್ರದೇಶಗಳಲ್ಲಿ ಇನ್ನು ಮುಂದೆ ಮನೆ ನಿರ್ಮಾಣಕ್ಕೆ ಅವಕಾಶ ನೀಡುವುದು ಬೇಡ ಎಂದು ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಸೂಚನೆ ನೀಡಿದ್ದಾರೆ.

ಬುಧವಾರ ಬಂಟ್ವಾಳ ತಾಪಂ ಸಭಾಂಗಣದಲ್ಲಿ ನಡೆದ ಶಾಸಕರ ನೇತೃತ್ವದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಷಯ ಪ್ರಸ್ತಾಪಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಪ್ರಸನ್ನ, 2013ರಲ್ಲಿ ತಗ್ಗು ಪ್ರದೇಶಗಳೆಂದು ಗುರುತಿಸಲಾದ ಠಾಣಾ ವ್ಯಾಪ್ತಿಯ ನಾವೂರು, ಸರಪಾಡಿ ಮತ್ತಿತರ ನೆರೆಪೀಡಿತ ಪ್ರದೇಶಗಳೆಂದು ಗುರುತಿಸಲಾದ ಜಾಗಗಳಲ್ಲಿ 30 ಮನೆಗಳಿದ್ದರೆ, 2018ರಲ್ಲಿ 74 ಮನೆಗಳು ನಿರ್ಮಾಣಗೊಂಡಿವೆ. ಪ್ರವಾಹ ಸಂದರ್ಭ ಮನೆಯವರು ಹಾಗೂ ಆಡಳಿತಕ್ಕೆ ಇದು ಪ್ರತಿ ವರ್ಷವೂ ಸಮಸ್ಯೆ ತಂದೊಡ್ಡುವ ಪ್ರದೇಶಗಳಾಗಿದ್ದು, ಇಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಮನೆ ಕಟ್ಟಲು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು. ಮಳೆಯಿಂದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮನೆಯೊಂದು ಸಂಪೂರ್ಣ ಕುಸಿದು, ಮನೆಯವರು ತೊಂದರೆಗೊಳಗಾಗಿದ್ದಾರೆ. ಇದುವರೆಗೂ ತಾಲೂಕಾಡಳಿತ ಒಂದು ರೂಪಾಯಿ ಪರಿಹಾರವನ್ನೂ ಒದಗಿಸಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಗಮನ ಸೆಳೆದರು.

ಬಂಟ್ವಾಳದಲ್ಲೇನಾದರೂ ಅನಾಥ ಶವ ದೊರಕಿದರೆ, ಅವನ್ನು ಇಡಲು ಶೈತ್ಯಾಗಾರದ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಾದರೆ ನಾವೇ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಾಂತರ ಪೊಲೀಸ್ ಎಸ್.ಐ. ಪ್ರಸನ್ನ ಹೇಳಿದರು. ನಗರ ಎಸ್.ಐ. ಚಂದ್ರಶೇಖರ್ ಜತೆಗಿದ್ದರು.

ಡೆಂಗೆ ನಿಯಂತ್ರಣ, ಫಾರ್ಮಾಸಿಸ್ಟ್ ಗಳ ಕೊರತೆ:

ಡೆಂಗೆ ಬಂಟ್ವಾಳ ತಾಲೂಕಿನಲ್ಲಿ ನಿಯಂತ್ರಣದಲ್ಲಿದೆ. ಆದರೆ ರಕ್ತಪರೀಕ್ಷೆಗೆ ಸರಕಾರಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ ಅಧಿಕವಾಗುತ್ತಿದೆ. ಇವರ ಅನುಕೂಲಕ್ಕಾಗಿ ತಾಲೂಕು ಆಸ್ಪತ್ರೆ ಮತ್ತು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಕ್ನಿಶಿಯನ್ ಗಳು ಮತ್ತು ಫಾರ್ಮಾಸಿಸ್ಟ್ ಗಳ ಕೊರತೆ ಇದ್ದು ಇದನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ. ದೀಪಾ ಪ್ರಭು ಹೇಳಿದರು.
ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯ ಎಂ.ಎಸ್. ಮಹಮ್ಮದ್, ತಾಲೂಕು ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ ಕುರಿತು ಗಮನ ಸೆಳೆದರು, ಈ ಸಂದರ್ಭ ಉತ್ತರಿಸಿದ ತಾಲೂಕು ಆರೋಗ್ಯಾಕಾರಿ ಡಾ. ದೀಪಾ ಪ್ರಭು, ಜನವರಿಯಿಂದ ಆಗಸ್ಟ್ ವರೆಗೆ ಬಂಟ್ವಾಳ ತಾಲೂಕಿನಲ್ಲಿ ಡೆಂಗೆ ಸಂಬಂಸಿ ಖಚಿತ ಪ್ರಕರಣ 82 ಇತ್ತು, ಆದರೆ ಜ್ವರ ಪ್ರಕರಣಗಳು ಮತ್ತು ರೋಗ ಇದೀಗ ನಿಯಂತ್ರಣದಲ್ಲಿದೆ, ಆದರೆ ತಾಲೂಕು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ರಾಜೇಶ್ ನಾಯ್ಕ್ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ವಿದ್ಯುತ್ ಸಮಸ್ಯೆ:

ಕರೋಪಾಡಿ ಬಹುಗ್ರಾಮ ಕುಡಿಯುವ ನೀರು ಪೂರೈಸುವ ವ್ಯವಸ್ಥೆಗೆ ವಿದ್ಯುತ್ ಪೂರೈಕೆ ಸಮಸ್ಯೆ ಅಡಚಣೆ ಉಂಟಾಗಿದೆ ಎಂದು ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಗಮನ ಸೆಳೆದರು. ಇಲಾಖೆಗಳ ಸಮನ್ವಯತೆ ಕೊರತೆಯಿಂದ ಇದು ತಡವಾಗುತ್ತಿದೆ ಎಂದರು. ಉತ್ತರಿಸಿ, ಕೆಪಿಟಿಸಿಎಲ್ ನಿಂದ 11 ಕೆವಿ ಸರ್ಕ್ಯೂಟ್ ಬ್ರೇಕರ್ ಒದಗಿಸಿದರೆ ಇದು ಸಾಧ್ಯ ಎಂದ ಮೆಸ್ಕಾಂ ಎಇಇ ನಾರಾಯಣ ಭಟ್, ಗ್ರಾಮೀಣ ನೀರು ಪೂರೈಕೆ ಇಲಾಖೆ ಈ ಕುರಿತು ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸಲು ಎಕ್ಸ್ ಪ್ರೆಸ್ ಫೀಡರ್ ಗೆ ಕೆಪಿಟಿಸಿಎಲ್ ಗೆ ಪತ್ರ ಬರೆಯಬೇಕಿದೆ ಎಂದರು. 26 ಕೋಟಿ ರೂಗಳ ಬಹುಗ್ರಾಮ ಯೋಜನೆ ಕೇವಲ 15 ಲಕ್ಷ ರೂಗಳ ಕೆಲಸದಿಂದಾಗಿ ತೊಂದರೆಗೊಳಗಾಗುವುದು ಬೇಡ ಎಂದ ಶಾಸಕ ರಾಜೇಶ್ ನಾಯ್ಕ್, ವಿದ್ಯುತ್ ಇಲಾಖೆ ಜೊತೆ ಮುಂದಿನ ತಿಂಗಳು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.

ಒಬ್ಬೊಬ್ಬರಿಗೆ 500 ಗಿಡ ಕೊಟ್ಟಿದ್ದೀರಾ:
ಇಲಾಖಾ ವತಿಯಿಂದ 35 ಸಾವಿರ ಗಿಡಗಳನ್ನು ಕೊಡಲಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದಾಗ ಯಾರಿಗೆಲ್ಲ ಕೊಟ್ಟಿದ್ದೀರಿ ಲೆಕ್ಕ ಕೊಡಿ ಎಂದು ಶಾಸಕರು ಕೇಳಿದರು. ಒಬ್ಬೊಬ್ಬರಿಗೆ 500 ಗಿಡಗಳನ್ನು ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ ಶಾಸಕ, ಅರ್ಹ ಫಲಾನುಭವಿಗಳಿಗಷ್ಟೇ ಗಿಡಗಳನ್ನು ಒದಗಿಸಿ, ಸರಕಾರದ ದುಡ್ಡು ಪೋಲಾಗಲು ಬಿಡಬೇಡಿ ಎಂದರು. ಸಾಮಾಜಿಕ ಅರಣ್ಯ ಇಲಾಖೆ ನರಿಂಗಾನ ಗ್ರಾಪಂ ವ್ಯಾಪ್ತಿಯಲ್ಲಿ ಬೆಲೆಬಾಳುವ ಮರಗಳನ್ನು ಕಡಿದುಕೊಂಡು ಹೋಗಿದ್ದು, ಅಲ್ಲಿ ಲೆಕ್ಕವ್ಯತ್ಯಾಸ ಆಗಿರುವ ಸಂಶಯ ಜನರಿಗಿದೆ. ಇದನ್ನು ನಿವಾರಿಸಬೇಕು ಎಂದು ಜಿಪಂ ಸದಸ್ಯೆ ಮಮತಾ ಗಟ್ಟಿ ಹೇಳಿದರು. ಇದೊಂದು ಗಂಭೀರ ಪ್ರಕರಣವಾಗಿದ್ದು, ಸೂಕ್ತ ತನಿಖೆ ನಡೆಸಲಾಗುವುದು ಎಂದು ಶಾಸಕ ತಿಳಿಸಿದರು.

ಬೆಂಜನಪದವು ಕ್ರೀಡಾಂಗಣ: ಬೆಂಜನಪದವು ಕ್ರೀಡಾಂಗಣ ನಿರ್ಮಾಣಕ್ಕೂ ಪೂರ್ವಭಾವಿಯಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದ ಶಾಸಕ, ಯೋಜನೆಗಳನ್ನು ಮಾಡುವ ಸಂದರ್ಭ ಅದರಿಂದ ಜನರಿಗೆ ಉಪಯೋಗವಾಗುತ್ತದೆಯೇ ಎಂಬುದನ್ನು ಗಮನದಲ್ಲಿರಿಸುವಂತೆ ತಿಳಿಸಿದರು.

3471 ಪ್ರಕರಣ ಬಾಕಿ:
೯೪ಸಿ, ೯೪ಸಿಸಿ ಗೆ ಸಂಬಂಸಿ 3471 ಪ್ರಕರಣಗಳು ಇನ್ನೂ ತಾಲೂಕಿನಲ್ಲಿ ಬಾಕಿ ಇವೆ ಎಂದು ಕಂದಾಯ ಇಲಾಖೆ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಮಾಹಿತಿ ನೀಡಿದರು. 507 ಮನೆಗಳಿಗೆ 10 ಸಾವಿರ ರೂಗಳನ್ನು ಪ್ರಾಕೃತಿಕ ವಿಕೋಪದಡಿ ಕೊಡಲಾಗಿದೆ. 100 ಮನೆಗಳು ನಾಶವಾಗಿವೆ ಎಂಬ ಲೆಕ್ಕವನ್ನು ಅಕಾರಿಗಳು ನೀಡಿದರು. ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಘಟಕಕ್ಕೆ ಜಾಗ ಮೀಸಲಿರಿಸುವಂತೆ ಶಾಸಕರು ಸೂಚಿಸಿದರು.

ಸರಕಾರಿ ಶಾಲೆಗಳಲ್ಲಿ ಅನುಕೂಲ ಇದ್ದ ಕಡೆ ಅಂಗನವಾಡಿ ಕೇಂದ್ರ ಶಿಫ್ಟ್ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಶಾಸಕರು ಈ ಕುರಿತು ಸಮೀಕ್ಷೆ ನಡೆಸುವಂತೆ ತಿಳಿಸಿದರು. ಆಹಾರ ಇಲಾಖೆಯ ಸರ್ವರ್ ಸಮಸ್ಯೆ, ತಾಲೂಕಿನಲ್ಲಿ ಬಿಪಿಎಲ್ ಕಾರ್ಡುದಾರರ ಸಂಖ್ಯೆ ಅಕವಾಗಿರುವ ಕುರಿತು ಹಾಗೂ ಸೈಕಲ್ ವಿತರಣೆ ಕುರಿತು ವಿಷಯ ಪ್ರಸ್ತಾಪಗೊಂಡಿತು. ಗೋಕಳವು ಸಬಂಸಿದ ಗಲಾಟೆಗಳಿಗೆ ಕಡಿವಾಣ ಹಾಕಲು ದನಗಳಿಗೆ ನಂಬರ್ ಹಾಕುವುದು ಸೂಕ್ತ ಎಂದು ಜಿಪಂ ಸದಸ್ಯೆ ಮಮತಾ ಗಟ್ಟಿ ಹೇಳಿದರು. ಶಾಲಾ ಕೊಠಡಿಗಳು ಸುಭದ್ರವಾಗಿದೆಯೇ ಎಂಬುದರ ಸರ್ವೆ, ಪೀಕ್ ಅವರ್ ಗಳಲ್ಲಿ ಧರ್ಮಸ್ಥಳಕ್ಕೆ ಬಿ.ಸಿ.ರೋಡಿನಿಂದ ತೆರಳುವ ಬಸ್ಸುಗಳ ಕೊರತೆ, ಹೊಸದಾಗಿ ರಚನೆಯಾದ ಕನ್ಯಾನ, ಕುಡ್ತಮುಗೇರು ಮಾರ್ಗ ಸಹಿತ ಹಲವೆಡೆ ಸರಕಾರಿ ಬಸ್ಸುಗಳನ್ನು ಹಾಕುವ ಕುರಿತು ಜನಪ್ರತಿನಿಗಳು ಒತ್ತಾಯಿಸಿದರು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ತುಂಗಪ್ಪ  ಬಂಗೇರ, ರವೀಂದ್ರ ಕಂಬಳಿ, ಮಂಜುಳಾ ಮಾವೆ, ಮಮತಾ ಗಟ್ಟಿ, ಕಮಲಾಕ್ಷಿ ಪೂಜಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನಾನಾ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

www.bantwalnews.com Editor: Harish Mambady

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮುಳುಗುವ ಜಾಗದಲ್ಲಿ ಮನೆ ಕಟ್ಟಲು ಪರ್ಮಿಶನ್ ಬೇಡ – ಬಂಟ್ವಾಳ ಶಾಸಕ ಸೂಚನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*