ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮಂಗಳೂರು ವಿವಿಯಲ್ಲಿ ತುಳು ಎಂ.ಎ. ಮೊದಲ ವರ್ಷ ಯಶಸ್ವಿಯಾಗಿ ಮುಕ್ತಾಯ, ದ್ವಿತೀಯ ವರ್ಷದ ಸೇರ್ಪಡೆಯು ಆಗಿದೆ. ತುಳು ಪಠ್ಯವನ್ನು ಪದವಿಯಲ್ಲಿ ಅನುಷ್ಠಾನ ಗೊಳಿಸುವುದಕ್ಕೆ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದ್ದಾರೆ.
ಬಂಟ್ವಾಳದಲ್ಲಿ ನಡೆದ ಬಂಟ್ವಾಳ ತಾಲೂಕು ತುಳು ಕೂಟ ವಾರ್ಷಿಕ ಮಹಾಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ಒಂದೂವರೆ ಕೋಟಿ ತುಳುವರಿದ್ದಾರೆ. ತುಳು ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸುವ ಪ್ರಯತ್ನ ಸದ್ಯೋಭವಿಷ್ಯದಲ್ಲಿ ಯಶಸ್ಸಾಗುವುದು. ಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತುಳು ಪಠ್ಯವನ್ನು ಓದಿ ೬೧೫ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿದ್ದು ಅದರಲ್ಲಿ ೬೩ ಮಂದಿ ಶೇ. ನೂರು ಅಂಕ ಪಡೆದಿದ್ದಾರೆ. ೪೩ ಶಾಲೆಯಲ್ಲಿ ೧ಸಾವಿರ ವಿದ್ಯಾರ್ಥಿಗಳು ತುಳು ಪಠ್ಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ ೯೦೦ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ತುಳು ಭಾಷಾವಾರು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪದವಿಯಲ್ಲಿ ತುಳು ಐಚ್ಚಿಕ ವಿಷಯವಾಗಿದೆ. ಈ ಅಕಾಡೆಮಿಕ್ ವರ್ಷದಲ್ಲಿ ಪ್ರತೀ ಶಾಲಾ ಕಾಲೇಜುಗಳಲ್ಲಿ ತುಳು ರಸ ಪ್ರಶ್ನೆ, ಪ್ರಬಂಧ ಸಹಿತ ವಿವಿದ ಸಾಹಿತ್ಯಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಿದೆ. ಈ ವರ್ಷ ತುಳು ಅಕಾಡೆಮಿಯ ಬೆಳ್ಳಿ ಹಬ್ಬದ ವರ್ಷದ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಜೀವಮಾನದ ಪ್ರಶಸ್ತಿಯನ್ನು ಈ ಸಲ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಆ. ೪ರಂದು ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಬಂಟ್ವಾಳ ತಾಲೂಕು ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ತುಳು ಭಾಷೆ ,ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು, ಸಂಘಸಂಸ್ಥೆಗಳ ಸಹಕಾರದಲ್ಲಿ ಇನ್ನಷ್ಟು ವಿಶಾಲವಾಗಿ ಹಮ್ಮಿಕೊಳ್ಳುವುದು. ತುಳು ಕಮ್ಮಟಗಳನ್ನು ಏರ್ಪಡಿಸುವುದು. ತುಳು ಭಾಷೆಯಲ್ಲಿ ರಾಮಾಯಣ, ಮಹಾಭಾರತ ,ಗಮಕ ಪಾರಾಯಣ, ಅರ್ಥ ವ್ಯಾಖ್ಯಾನ ಹಮ್ಮಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಒಕ್ಕೂಟ ಕಾರ್ಯದರ್ಶಿ ಡಿ.ಎಂ. ಕುಲಾಲ್ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಮುಖ್ಯ ಶಿಕ್ಷಕ ಸೇಸಪ್ಪ ಮಾಸ್ಟರ್ ಸ್ವಾಗತಿಸಿ, ಸುಭಾಶ್ಚಂದ್ರ ಜೈನ್ ಪ್ರಸ್ತಾವಿಸಿ ಲೆಕ್ಕಪತ್ರ ಮಂಡಿಸಿದರು. ಮೋಹನ್‌ದಾಸ್ ಕೊಟ್ಟಾರಿ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ತುಳು ಎಂ.ಎ. ಮೊದಲ ವರ್ಷ ಯಶಸ್ವಿ: ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ"