29ರಂದು ಒಡಿಯೂರು ಶ್ರೀಗಳ ಜನ್ಮದಿನೋತ್ಸವ, ಗುರುವಂದನ, ಗ್ರಾಮೋತ್ಸವ
www.bantwalnews.com ಸಂಪಾದಕ: ಹರೀಶ ಮಾಂಬಾಡಿ
ಶ್ರೀ ಒಡಿಯೂರು ಗ್ರಾಮೋತ್ಸವ ಸೋಮವಾರ ಜುಲೈ 29ರಂದು ನಡೆಯಲಿದೆ. ಇದು ಸಮಾಜಮುಖಿ ಚಿಂತನೆಗಳನ್ನು ಸಾಕಾರಗೊಳಿಸುವ ಭಾಗವಾಗಿ ನಡೆಯುತ್ತದೆ. ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ಧಿ, ಸಂಸ್ಕೃತಿಯ ಉಳಿವಿಗೆ ಗ್ರಾಮೋತ್ಸವ, ದುಶ್ಚಟಮುಕ್ತ ಸಮಾಜ ಬೆಳೆಸಲು ಹಾಗೂ ಪ್ರೀತಿ ವಿಶ್ವಾಸಗಳನ್ನು ಜನರಲ್ಲಿ ಮೂಡಿಸಲು ಪ್ರತಿ ವರ್ಷ ನಡೆಸಲಾಗುವ ಗ್ರಾಮೋತ್ಸವ ಸಹಕಾರಿಯಾಗಲಿದೆ.
ಹೀಗೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಗ್ರಾಮೋತ್ಸವ ಮತ್ತು ಗುರುವಂದನೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಗುರುವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಒಡಿಯೂರಿನ ಶ್ರೀ ಗ್ರಾಮವಿಕಾಸ ಯೋಜನೆ ಅನುಷ್ಠಾನದಲ್ಲಿರುವ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳ ಒಡಿಯೂರು ಶ್ರೀ ವಿಕಾಸವಾಹಿನಿ ಘಟಕಗಳ ಹಾಗೂ ಸಂಘ ಸಂಸ್ಥೆಗಳ ಸುಮಾರು 30 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇದು ಕ್ಷೇತ್ರದ ಭಕ್ತರು ತೊಡಗಿಸಿಕೊಳ್ಳುವ ಸೇವಾರೂಪದ ನಿದರ್ಶನ ಎಂದು ಹೇಳಿದ ಶ್ರೀಗಳು, ತಾಲೂಕಿನ 84 ಗ್ರಾಮಗಳ ಸಹಿತ ಜಿಲ್ಲೆಯಾದ್ಯಂತ ಸರಳ ಜೀವನ, ಸಂಸ್ಕಾರ, ಸಂಜೀವಿನಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಹಾಗೂ ಜನಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿದೆ. ತ್ಯಾಗದಿಂದ ತುಂಬಿದ ಜನಾರ್ದನ ಸೇವೆ ಇಂದು ಅಗತ್ಯ, ಒಡಿಯೂರು ಶಾಲೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣವನ್ನುಉಚಿತವಾಗಿ ನೀಡಲಾಗುತ್ತಿದೆ. ಹೀಗೆ ಸಂಸ್ಕೃತಿಯನ್ನು ಬೆಳೆಸುವ ಹತ್ತು ಹಲವು ಯೋಜನೆಗಳು ಒಡಿಯೂರಿನಿಂದಾಗಿದ್ದು, ಭವಿಷ್ಯದಲ್ಲಿ ಆಧ್ಯಾತ್ಮವನ, ಗಿಡಮೂಲಿಕಾ ಸುರಕ್ಷಣಾ ಕೇಂದ್ರ ಮತ್ತು ಗೋಸಂರಕ್ಷಣಾ ಕೇಂದ್ರವನ್ನು ನಿರ್ಮಿಸುವ ಯೋಜನೆಗಳಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಶ್ರೀಗಳು ವಿವರಿಸಿದರು.
ಜನ್ಮದಿನೋತ್ಸವ, ಗುರುವಂದನ ಗ್ರಾಮೋತ್ಸವದಲ್ಲಿ ಏನಿರುತ್ತದೆ:
ಶ್ರೀಗಳ ಜನ್ಮದಿನೋತ್ಸವ, ಗುರುವಂದನ ಸಮಾರಂಭ ಹೀಗಿರುತ್ತದೆ. ಬೆಳಗ್ಗೆ ಗಣಪತಿ ಹವನ, ಶ್ರೀಗಳಿಂದ ಗ್ರಾಮೋತ್ಸವಕ್ಕೆ ಚಾಲನೆ, ಸಾಧ್ವಿ ಶ್ರೀ ಮಾತಾನಂದಮಯೀ ಅವರ ಉಪಸ್ಥಿತಿಯಲ್ಲಿ ಶ್ರೀ ಗುರುಪಾದುಕಾರಾಧನೆ, ಪಾದಪೂಜೆ, ಬಳಿಕ ಶ್ರೀಗಳವರ ತುಲಾಭಾರ. ಈ ಬಾರಿ ಲಡ್ಡುಗಳಿಂದ ನಡೆಯುವುದು ವಿಶೇಷ. ಬಳಿಕ ಜನ್ಮದಿನದ ಸಂದೇಶ. ಸಭಾಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಕಟೀಲು ಅನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಭಾಗವಹಿಸುವರು.
ಈ ಸಂದರ್ಭ ಸಸಿ ವಿತರಣೆ, ವನಮಹೋತ್ಸವ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವೈದ್ಯಕೀಯ ಶುಶ್ರೂಷೆಗೆ ಸಹಾಯ, ಅಪೇಕ್ಷಿತ ಬಂಧುಗಳ ಮನೆಗಳ ನಿರ್ಮಾಣ, ದುರಸ್ತಿಗೆ ಸಹಕಾರ, ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯುವುದು.
ಪತ್ರಿಕಾಗೋಷ್ಠಿ ಸಂದರ್ಭ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ವಿವಿಧ ಘಟಕಗಳ ಪದಾಧಿಕಾರಿಗಳು, ಪ್ರಮುಖರಾದ ಸುರೇಶ್ ರೈ, ಕಿರಣ್ ಉರ್ವ, ಅಶೋಕ್ ಕುಮಾರ್ ಬಿಜೈ, ವೇಣುಗೋಪಾಲ ಮಾರ್ಲ, ಸದಾಶಿವ ಅಳಿಕೆ, ಲಿಂಗಪ್ಪ ಗೌಡ, ಸೇರಾಜೆ ಗಣಪತಿ ಭಟ್, ಯಶವಂತ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಸಮಾಜಮುಖಿ ಚಿಂತನೆ ಸಾಕಾರಗೊಳಿಸಲು ಶ್ರೀ ಒಡಿಯೂರು ಗ್ರಾಮೋತ್ಸವ"