ಗ್ರಾಹಕರ ಹಿತವನ್ನು ಕಾಪಾಡುವುದು, ಅವರಿಗೆ ಸಹಕಾರ ನೀಡುವ ಬದ್ಧತೆಯನ್ನು ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹೊಂದಿದೆ ಎಂದು ಮಾಜಿ ಸಚಿವ, ಸೊಸೈಟಿ ಅಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಜೋಡುಮಾರ್ಗದಲ್ಲಿ ಸೋಮವಾರ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾನ ಮನಸ್ಕರು ಸೇರಿಕೊಂಡು ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸೊಸೈಟಿಯನ್ನು ಆರಂಭಿಸಿದ್ದೇವೆ. ಮುಂದೆ ತಾಲೂಕಿನ ಗ್ರಾಮೀಣ ಭಾಗಗಳಿಗೂ ವಿಸ್ತರಿಸುವ ಉದ್ದೇಶ ಇದೆ ಎಂದ ಅವರು, ಸಹಕಾರ ಸಂಘಗಳ ನಿಬಂಧನೆಗೆ ಪೂರಕವಾಗಿ ಕೆಲಸ ಮಾಡಲಿರುವ ಸಂಸ್ಥೆ ಬಂಟ್ವಾಳ ತಾಲೂಕಿನ ಜನರ ಆಶೋತ್ತರಗಳನ್ನು ಆರ್ಥಿಕ ಅಗತ್ಯಗಳಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸೊಸೈಟಿಯ ಸಲಹಾ ಸಮಿತಿಯ ಪ್ರಕಾಶ ಕಾರಂತ, ಬಿ.ಎಚ್. ಖಾದರ್, ಮಾಧವ ಮಾವೆ ಉಪಾಧ್ಯಕ್ಷರಾಗಿ ಮಾಯಿಲಪ್ಪ ಸಾಲಿಯಾನ್, ಮುಖ್ಯ ಕಾರ್ಯನಿರ್ವಹಣಾಕಾರಿಯಾಗಿ ಬೇಬಿ ಕುಂದರ್, ಆಡಳಿತ ಮಂಡಳಿ ನಿರ್ದೇಶಕರಾಗಿ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಸುದರ್ಶನ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಮಂಜುಳಾ ಮಾಧವ ಮಾವೆ, ವಾಣಿ ಪ್ರಕಾಶ ಕಾರಂತ, ಪಿಯೂಸ್ ಎಲ್. ರೋಡ್ರಿಗಸ್, ನಾರಾಯಣ ನಾಯಕ್, ಆಲೋನ್ಸ್ ಮಿನೇಜಸ್, ಅಮ್ಮು ಅರ್ಬಿಗುಡ್ಡೆ ಕಾರ್ಯನಿರ್ವಹಿಸಲಿದ್ದಾರೆ ಇವರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಸಮರ್ಥರಾಗಿದ್ದಾರೆ ಎಂದು ರೈ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಕಾರ ಸಂಘಗಳ ದ.ಕ.ಜಿಲ್ಲಾ ಉಪನಿಬಂಧಕ ಬಿ.ಕೆ.ಸಲೀಂ, ಬಂಟ್ವಾಳ ಸಹಕಾರ ಕ್ಷೇತ್ರಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದು, ಸೊಸೈಟಿ ಮೇಲೆ ನಂಬಿಕೆಯನ್ನು ಗ್ರಾಹಕರಿಗೆ ಮೂಡಿಸಲು ಉತ್ತಮ ನಿರ್ದೇಶಕ ಮಂಡಳಿ ಅಗತ್ಯವಿದ್ದು, ಈ ಸೊಸೈಟಿಯಲ್ಲಿ ಅದನ್ನು ಕಾಣಬಹುದು ಎಂದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಸಹಕಾರಿಗಳು ಒಂದಾದಾಗ ಎಲ್ಲ ಜಾತಿ, ವರ್ಗಕ್ಕೆ ಅನುಕೂಲವಾಗುತ್ತದೆ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ನಿರ್ದೇಶಕರಲ್ಲೊಬ್ಬರಾದ ಸುದರ್ಶನ್ ಜೈನ್, ಜನರ ನಾಡಿಮಿಡಿತವನ್ನು ಅರಿತವರಿಂದ ಈ ಸೊಸೈಟಿ ರಚನೆಯಾಗಿದ್ದು, ಮೊದಲ ದಿನವೇ ಉತ್ತಮ ಸ್ಪಂದನೆ ದೊರಕಿದೆ. ಎಸ್.ಬಿ ಅಕೌಂಟ್ ಪ್ರಾರಂಭಿಸಿದ್ದು, ಪಿಗ್ಮಿ ಸೌಲಭ್ಯವನ್ನೂ ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದರು.
ಸ್ವಾಗತಿಸಿ, ಬ್ಯಾಂಕಿನ ಕುರಿತು ಮಾಹಿತಿ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್, ಈಗಾಗಲೇ 608 ಸದಸ್ಯರು ಸೇರ್ಪಡೆಯಾಗಿ 8 ಲಕ್ಷ ರೂ ಶೇರು ಸಂಗ್ರಹವಾಗಿದೆ. ನಿರಖು ಠೇವಣಿ ಸಹಿತ ಸೊಸೈಟಿ ಮೇಲೆ ವಿಶ್ವಾಸವಿಟ್ಟು, ಹಣ ಹೂಡಿಕೆ ಮಾಡುವವರು ಮುಂದೆ ಬಂದಿರುವುದು ಭವಿಷ್ಯದಲ್ಲಿ ಸೊಸೈಟಿ ಉತ್ತಮ ಪ್ರಗತಿಯನ್ನು ಪ್ರದರ್ಶಿಸುವುದಕ್ಕೆ ದಿಕ್ಸೂಚಿ ಎಂದರು.
ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಕ್ಕಾರು ಮೋನಪ್ಪ ಶೆಟ್ಟಿ, ಸಹಕಾರ ಸಂಘಗಳ ಸಹಕಾರಿ ಅಭಿವೃದ್ಧಿ ಅಧಿಕಾರಿ ತ್ರಿವೇಣಿ, ಸಲಹಾ ಸಮಿತಿ ಸದಸ್ಯ ಬಿ.ಎಚ್.ಖಾದರ್, ಪ್ರಕಾಶ್ ಕಾರಂತ್, ಉಪಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ನಿರ್ದೇಶಕರೂ ಆಗಿರುವ ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ ಸ್ವಾಗತಿಸಿದರು. ಮತ್ತೋರ್ವ ನಿರ್ದೇಶಕ ಎಂ.ಎಸ್.ಮುಹಮ್ಮದ್ ವಂದಿಸಿದರು. ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.ಇದಕ್ಕೂ ಮುನ್ನ ಬ್ಯಾಂಕ್ ಶಾಖೆ, ಕಂಪ್ಯೂಟರ್, ಲಾಕರ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಬಿಲ್ಲವ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಉಪಸ್ಥಿತರಿದ್ದರು. ಪ್ರಥಮ ನಿರಖು ಠೇವಣಿ ರಶೀದಿ ಪ್ರಥಮ ಉಳಿತಾಯ ಖಾತೆಯ ಪತ್ರ,, ಪಾಲು ಬಂಡವಾಳ ಪತ್ರವನ್ನು ವಿತರಿಸಲಾಯಿತು. ಕಟ್ಟಡಕ್ಕೆ ದುಡಿದ ಇಂಜಿನಯರ್ ಅವರನ್ನು ಸನ್ಮಾನಿಸಲಾಯಿತು.
Be the first to comment on "ಗ್ರಾಹಕರ ಹಿತರಕ್ಷಣೆ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಧ್ಯೇಯ"