ಸಾರ್ವಜನಿಕರ ಸಲಹೆ ಪಡೆದು ಕಾರ್ಯ – ರಾಜೇಶ್ ನಾಯ್ಕ್
ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆಯಾದ ಬಿ.ಸಿ.ರೋಡ್ ಸೌಂದರ್ಯವೃದ್ಧಿಗೆ ಶನಿವಾರ ಮಂಗಳೂರಿನಲ್ಲಿ ಸಮಾಲೋಚನಾ ಸಭೆ ಅಧಿಕಾರಿಗಳು ಮತ್ತು ಪ್ರಾಯೋಜಕರ ಜೊತೆ ಸಂಸದ ನಳಿನ್ ಕುಮಾರ್ ಕಟೀಲು ಉಪಸ್ಥಿತಿಯಲ್ಲಿ ನಡೆಯಿತು.ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮತ್ತು ಪ್ರಾಯೋಜಕ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.
ಮಂಗಳೂರಿನ ವಿನ್ಯಾಸಕ ಧರ್ಮರಾಜ್ ಈ ಕುರಿತು ರೂಪಿಸಿದ ನಕ್ಷೆಯನ್ನು ಪ್ರದರ್ಶಿಸಿದರು. ಬಿ.ಸಿ.ರೋಡಿನ ನಾರಾಯಣಗುರು ವೃತ್ತದಿಂದ ಕೈಕಂಬದ ವರೆಗಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಈ ಕುರಿತು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಸ್ತುತ ಬಿ.ಸಿ.ರೋಡ್ ನಗರ ಸುಂದರೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬಿ.ಸಿ.ರೋಡಿನ ನಾರಾಯಣಗುರು ವೃತ್ತದಿಂದ ಕೈಕಂಬದ ವರೆಗಿನ 15 ಕೋ.ರೂ.ಗಳ ಕಾಮಗಾರಿಗೆ ಆಷಾಢ ಮುಗಿದ ಕೂಡಲೇ ಚಾಲನೆ ನೀಡಲಾಗುವುದು ಎಂದು ಹೇಳಿದರು. ವಿನ್ಯಾಸಕ ಎಂಜಿನಿಯರ್ ಧರ್ಮರಾಜ್ ಅವರು ಸುಂದರೀಕರಣದ ಕುರಿತು ಯೋಜನೆ ರೂಪಿಸುತ್ತಿದ್ದು, ಬಹುತೇಕ ಕಾಮಗಾರಿಗಳಿಗೆ ಪ್ರಾಯೋಜಕರು ಮುಂದೆ ಬಂದಿದ್ದಾರೆ. ಮಂಗಳೂರಿನ ಸಭೆಯಲ್ಲಿ ಹೆದ್ದಾರಿ ಎಂಜಿನಿಯರ್ ಗಳು ಸಹಿತ ಸಾಕಷ್ಟು ಮಂದಿ ಉಪಸ್ಥಿತರಿದ್ದು, ತಮ್ಮ ಸಲಹೆಗಳನ್ನು ನೀಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಎರಡು ಶೌಚಾಲಯ, ಗುಣಮಟ್ಟದ ಸಿಸಿ ಕ್ಯಾಮರ ,ವಿದ್ಯುದ್ದೀಪ ಅಳವಡಿಕೆ,ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗ ವೃತ್ತ ನಿರ್ಮಾಣ ಸಹಿತ ಹಲವು ಅಭಿವೃದ್ದಿ ಕೆಲಸಗಳು ಈ ಸುಂದರೀಕರಣ ಯೋಜನೆಯ ನೀಲನಕಾಶೆಯಲ್ಲಿ ಸೇರಿದೆ ಎಂದರು.
ಬಿ.ಸಿ.ರೋಡು ಸುಂದರೀಕರಣದ ಜತೆಗೆ ಬಂಟ್ವಾಳ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದೆ ಬಂಟ್ವಾಳದ ಗಣ್ಯರ ಸಮಿತಿಯೊಂದನ್ನು ರಚಿಸಿಕೊಂಡು ಅವರ ಸಲಹೆ ಪಡೆಯುವ ಯೋಚನೆಯೂ ಇದೆ. ಮುಂದಿನ ದಿನಗಳಲ್ಲಿ ಸಮಿತಿಯ ಹೆಸರನ್ನು ಪ್ರಕಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಿ.ದೇವದಾಸ್ ಶೆಟ್ಟಿ, ದೇವಪ್ಪ ಕರ್ಕೇರ ಉಪಸ್ಥಿತರಿದ್ದರು.
ಬಂಟ್ವಾಳನ್ಯೂಸ್ ಈ ಹಿಂದೆಯೇ ಬಿ.ಸಿ.ರೋಡ್ ನ ಸಮಸ್ಯೆಗಳ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿತ್ತು.
Be the first to comment on "ಬಿ.ಸಿ.ರೋಡ್ ಸೌಂದರ್ಯವೃದ್ಧಿಗೆ ಸಮಾಲೋಚನೆ"