ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣಾ ವೇದಿಕೆ ಮಂಗಳೂರು ವತಿಯಿಂದ ಬಂಟ್ವಾಳದಲ್ಲಿ ಗೋವಂಶದ ಮೇಲಿನ ಕ್ರೌರ್ಯ, ಗೋಕಳ್ಳತನ, ಅಕ್ರಮ ಗೋಸಾಗಾಟ ವಿರುದ್ಧ ಪ್ರತಿಭಟನೆ ಬುಧವಾರ ನಡೆಯಿತು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ದುರ್ಗಾವಾಹಿನಿ ಸಂಚಾಲಕಿ ವಿದ್ಯಾ ಮಲ್ಯ, ಹಿಂದು ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಗೋವಂಶವನ್ನು ನಿರ್ಮೂಲನೆ ಮಾಡಲು ಪ್ರಚೋದಿಸುವ ಅಕ್ರಮ ಗೋಸಾಗಾಟವನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರೆ ಇತ್ತರು.
ಸಂಪೂರ್ಣ ಗೋರಕ್ಷಣೆಗೆ ಕ್ರಮ ಕೈಗೊಳ್ಳದೇ ಇದ್ದರೆ, ಸಂವಿಧಾನದ ಚೌಕಟ್ಟಿನಲ್ಲಿ ನೇರ ಕಾರ್ಯಾಚರಣೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ, ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ನರಸಿಂಹ ಶೆಟ್ಟಿ, ವಿಶ್ವ ಹಿಂದು ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಜರಂಗದಳ ಬಂಟ್ವಾಳ ಪ್ರಖಂಡ ಸಂಚಾಲಕ ಅಕೇಶ್, ಪ್ರಮುಖರಾದ ಗುರುರಾಜ ಬಂಟ್ವಾಳ, ಬಿಜೆಪಿ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ವಜ್ರನಾಥ ಕಲ್ಲಡ್ಕ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಬಂಟ್ವಾಳ ತಹಶೀಲ್ದಾರ್ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರಾಣಿ ಕ್ರೌರ್ಯ ತಡೆ ಮಂಡಳಿ ನಿಯಮಾವಳಿ ಜಾರಿ ಬಂದು 18 ವರ್ಷಗಳಾದರೂ ಕ್ರಮ ಕೈಗೊಂಡಿಲ್ಲ, ಹಿಂಸಾತ್ಮಕ ಗೋಸಾಗಾಟವನ್ನು ತಡೆಹಿಡಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ, ಗೋಕಳ್ಳನನ್ನು ಸಾರ್ವಜನಿಕರು ಹಿಡಿಯಲು ಹೆದರುವಂತಾಗಿದೆ, ಜಿಲ್ಲೆಯ ನಾನಾ ಕಡೆ ಅಕ್ರಮ ಕಸಾಯಿಖಾನೆಗಳಿದ್ದರೂ ಅವುಗಳ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಪ್ರಶ್ನಿಸಿದರು. ಕಾರ್ಯಕ್ರಮದ ಸಂದರ್ಭ ಗೋಪೂಜೆಯನ್ನು ಸ್ವಾಮೀಜಿ ನೆರವೇರಿಸಿದರು.
Be the first to comment on "ಅಕ್ರಮ ಗೋಸಾಗಾಟ, ಕಸಾಯಿಖಾನೆ ಕೊನೆಗೊಳಿಸಿ: ಬಂಟ್ವಾಳದಲ್ಲಿ ಪ್ರತಿಭಟನೆ"