ಬಿ.ಸಿ.ರೋಡಿನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರು ಆರಂಭಗೊಂಡ ಸಾಲು ಕೋರ್ಟ್ ಗೇಟಿನವರೆಗೂ ಶನಿವಾರ ಬೆಳಗ್ಗೆ ವ್ಯಾಪಿಸಿತ್ತು. ಬೆಳಗ್ಗೆ 6 ಗಂಟೆಯಿಂದ 10.30ರವರೆಗೆ ಉದ್ದದ ಸಾಲು ನೋಡುಗರ ಹುಬ್ಬೇರಿಸಿದರೆ, ಮಗುವನ್ನೆತ್ತಿ ನಿಂತ ಮಹಿಳೆಯರು, ಮಳೆ ಬರುತ್ತದೋ ಅಥವಾ ಬಿಸಿಲು ಕಾಯುತ್ತದೆಯೋ ಎಂದು ಆತಂಕದಲ್ಲಿ ನಿಂತ ವೃದ್ಧರು.. ಹೀಗೆ ಸಾಲು ಉದ್ದವಾಗುತ್ತಿತ್ತು.
ಶನಿವಾರ ಎಸ್.ಬಿ.ಐ. ಶಾಖೆಯಲ್ಲಿರುವ ಆಧಾರ್ ಕೇಂದ್ರದಲ್ಲಿ ಆಧಾರ್ ಕಾರ್ಡಿಗೆ ಮುಂಗಡ ಟೋಕನ್ ಪಡೆಯಲು ಈ ಸಾಲು ಇತ್ತು.
ಬೇಗನೆ ಬ್ಯಾಂಕಿನ ಬಳಿ ಬಂದರೆ ಟೋಕನ್ ಪಡೆದು ತಮ್ಮ ಕೆಲಸ ಕಾರ್ಯಗಳಿಗೆ ತೆರಳಬಹುದು ಎಂಬ ಆಸೆಯಿಂದ ಬಂದು ಕ್ಯೂ ನಿಂತವರು ಇವರು. ಆಧಾರ್ ಟೋಕನ್ ಕೊಡುವವರು ಕ್ಯೂ ನಿಲ್ಲಿ ಎಂದು ಹೇಳಿಲ್ಲ, ಆದರೆ ಕ್ಯೂ ನಿಂತರೆ ತಮಗೆ ಟೋಕನ್ ಸಿಗಬಹುದೋ ಎಂಬ ಆಸೆ ಬಂದವರದ್ದು.
ಟೋಕನ್ ಪಡೆಯಲು ಜನ ಬೆಳಗ್ಗಿನಿಂದಲೇ ಕಾಯುತ್ತಿದ್ದರೂ 10 ಗಂಟೆಯವರೆಗೂ ಟೋಕನ್ ವಿತರಣೆ ಆರಂಭವಾಗಿರಲಿಲ್ಲ. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳು ಈ ವಿಚಾರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಹಾಗೂ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರ ಗಮನಕ್ಕೆ ತಂದರು. ಬಳಿಕ ಸಂಬಂಧಪಟ್ಟವರಿಗೆ ತಕ್ಷಣ ಟೋಕನ್ ವಿತರಿಸಲು ಸೂಚನೆ ಬಂತು.
ತಿಂಗಳ ನಾಲ್ಕನೇ ಶನಿವಾರ, ಬ್ಯಾಂಕಿಗೆ ರಜೆ ಹೀಗಾಗಿ, ಬ್ಯಾಂಕಿನ ಹೊರ ಭಾಗದಲ್ಲಿಯೇ ಟೋಕನ್ ವಿತರಿಸಲಾಯಿತು.
ಬಂಟ್ಬಾಳ ತಾಲೂಕಿನಲ್ಲಿ 5 ಕಡೆಗಳಲ್ಲಿ ಮಾತ್ರ ಆಧಾರ್ ಟೋಕನ್ ನೀಡುವ ಕೇಂದ್ರಗಳಿರುವುದು ಸಮಸ್ಯೆಗೆ ಕಾರಣ. ಬ್ಯಾಂಕಿನ ಮುಂದೆ ಸಾರ್ವಜನಿಕರು ಕಾಯುವ ಪರಿಸ್ಥಿತಿ ಇದ್ದು ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಈ ಸಂದರ್ಭ ಸ್ಥಳದಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಪ್ರಭಾಕರ ದೈವಗುಡ್ಡೆ ಒತ್ತಾಯಿಸಿದರು.
ಆಧಾರ್ ಕಾರ್ಡ್ ನೋಂದಾಣಿ ಹಾಗೂ ವಿತರಣೆಯ ಬಗ್ಗೆ ಈಗಲೂ ಸಮಸ್ಯೆಗಳಿದ್ದು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬೃಹತ್ ಆಧಾರ್ ಅದಾಲತ್ ಮಾಡಲಾಗುವುದು ಎಂದು ಈ ಕುರಿತು ತಹಶೀಲ್ದಾರ್ ರಶ್ಮಿ ಪ್ರತಿಕ್ರಿಯಿಸಿದ್ದಾರೆ.
ವಿಶೇಷವೆಂದರೆ ಈ ಸಮಸ್ಯೆ ಕೇಂದ್ರ ಸರಕಾರಕ್ಕೆ ಸೇರಿದ್ದಾ, ರಾಜ್ಯ ಸರಕಾರಕ್ಕೆ ಸೇರಿದ್ದಾ? ನಾವು ಪ್ರತಿಕ್ರಿಯಿಸಬಹುದಾ, ಬೇಡವಾ, ಪ್ರತಿಕ್ರಿಯಿಸಿದರೆ ಯಾರಿಗೆ ಲಾಭ, ನಷ್ಟ ಎಂಬ ಚಿಂತೆಯಲ್ಲಿ ಕೆಲ ರಾಜಕೀಯ ಪಕ್ಷಗಳ ಒಲವುಳ್ಳವರು ಇದ್ದುದು ಕಂಡುಬಂತು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Be the first to comment on "ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರು ಬೆಳಗ್ಗೆಯೇ ಸಾಲುಗಟ್ಟಿ ನಿಂತದ್ದು ಯಾಕೆ?"