ಮೊದಲ ಮಳೆಗೆ ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಎದುರು ನೀರು ನಿಂತು ಸಮಸ್ಯೆ ಉಂಟಾಗಿದ್ದನ್ನು ಈ ಹಿಂದೆ ಬಂಟ್ವಾಳನ್ಯೂಸ್ ಸಹಿತ ಹಲವು ಮಾಧ್ಯಮಗಳು ಪ್ರಕಟಿಸಿದ್ದವು. ಆದರೆ ಬಿ.ಸಿ.ರೋಡ್ ಅಷ್ಟು ಬೇಗ ಬದಲಾಗುವುದಿಲ್ಲ ಎಂಬುದನ್ನು ಸೋಮವಾರ ರಾತ್ರಿಯಿಂದೀಚೆಗೆ ಸುರಿದ ಮಳೆ ನಿರೂಪಿಸಿತು.
ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರು ನಡೆದುಕೊಂಡು ಹೋಗುವವರಷ್ಟೇ ಅಲ್ಲ, ವಾಹನ ಸವಾರರೂ ಸಮಸ್ಯೆ ಅನುಭವಿಸಬೇಕು. ಕೆಲವು ವರ್ಷಗಳಾಯಿತು. ಈ ಸಮಸ್ಯೆಗೆ ಇನ್ನೂ ಮುಕ್ತಿ ದೊರಕಿಲ್ಲ. ಟೂರಿಸ್ಟ್ ಟ್ಯಾಕ್ಸಿ ನಿಲ್ಲಲೂ ಇದೇ ಜಾಗ, ಆಟೋಗಳು ನಿಲ್ಲಲೂ ಇದೇ ಜಾಗ, ವಾಹನ ಸಂಚಾರಕ್ಕೂ ಇದೇ ಜಾಗ, ನಡೆದುಕೊಂಡು ಹೋಗಲೂ ಇದೇ ಜಾಗ. ಈ ಮಳೆಗಾಲವೂ ಸಮಸ್ಯೆ ಅನುಭವಿಸಬೇಕು ಎನ್ನುತ್ತಾರೆ ಸಾರ್ವಜನಿಕರು.
ಬಿ.ಸಿ.ರೋಡಿನ ರಸ್ತೆಯ ತುಂಬೆಲ್ಲ ಎಂದಿನಂತೆ ನೀರು ನಿಂತ ದೃಶ್ಯಗಳು ಕಂಡುಬಂದವು.
ಬಿ.ಸಿ.ರೋಡಿನ ಫ್ಲೈ ಓವರ್ ಮೇಲ್ಭಾಗದಿಂದ ವಾಹನಗಳು ಸಂಚರಿಸುವಾಗ ನೀರು ಕೆಳಕ್ಕೆ ಚಿಮ್ಮುತ್ತಿದ್ದರೆ, ಸ್ಟೇಟ್ ಬ್ಯಾಂಕ್ ಎದುರು ನಿರೀಕ್ಷೆಯಂತೆ ನೀರು ರಸ್ತೆಯ ಮಧ್ಯೆಯೇ ಹರಿಯುತ್ತಿತ್ತು. ಬಿ.ಸಿ.ರೋಡ್ ಸರ್ವೀಸ್ ರಸ್ತೆ ನಿರ್ಮಾಣವಾಗುವ ಸಂದರ್ಭವೇ ಸಮರ್ಪಕವಾದ ಚರಂಡಿ ವ್ಯವಸ್ಥೆ ಸಹಿತ ನೀರು ಹರಿದುಹೋಗಲು ಸರಿಯಾದ ರೂಪುರೇಷೆಗಳನ್ನು ಮಾಡದ ಪರಿಣಾಮ, ಪ್ರಯಾಣಿಕರು ಮತ್ತು ಪಾದಚಾರಿಗಳು ಅದರ ಶಿಕ್ಷೆ ಅನುಭವಿಸಿದರು.
ಸರ್ವೀಸ್ ರಸ್ತೆ ಕಾಮಗಾರಿ ನಡೆಯುವ ಸಂದರ್ಭವೇ ಬಂಟ್ವಾಳನ್ಯೂಸ್ ಸಹಿತ ಮಾಧ್ಯಮಗಳು ಇಲ್ಲಿ ಫುಟ್ ಪಾತ್ ಇಲ್ಲದಿರುವುದು, ನೀರು ಹರಿಯಲು ಸರಿಯಾದ ಜಾಗವಿಲ್ಲದಿರುವ ವಿಚಾರಗಳ ಕುರಿತು ಪ್ರಸ್ತಾಪಿಸಿತ್ತು. ಆದರೆ ಇದು ತನಗೆ ಸಂಬಂಧವೇ ಇಲ್ಲ ಎಂಬ ಅಧಿಕಾರಿಗಳು, ಕೋಟಿ ಲೆಕ್ಕದಲ್ಲಿ ಮಾತನಾಡುವ ಜನಪ್ರತಿನಿಧಿಗಳು, ಸುಡುಬಿಸಿಲು, ಜಡಿಮಳೆಯನ್ನು ಲೆಕ್ಕಿಸದೆ ನಿಲ್ಲುವ ಪಾಪದ ಪ್ರಯಾಣಿಕರ ಬವಣೆ ಹೇಗಿರುತ್ತದೆ ಎಂದು FEEL ಮಾಡಿಕೊಳ್ಳಲಿಲ್ಲ. ಒಂದು ಬಾರಿ ಇಲ್ಲಿ ಬಸ್ಸಿಗೆ ಕಾದು ಬಸ್ ಹತ್ತಿ ಹೋದರೆ ಗೊತ್ತಾಗುತ್ತದೆ ಎಂದು ಸ್ಥಳೀಯ ಪ್ರಯಾಣಿಕರೊಬ್ಬರು ಹೇಳುತ್ತಿರುವುದು ಹಾಗೆಯೇ ಅರಣ್ಯರೋದನವಾಯಿತು.
ರಸ್ತೆಯ ತುಂಬೆಲ್ಲಾ ನೀರು ಹೊಳೆಯಂತೆ ನಿಂತಿದ್ದು, ಅಲ್ಲೇ ಇದ್ದ ಅಂಗಡಿಗಳ ಒಳಗೆ ನುಗ್ಗಿತ್ತು. ಕೆಲವೆಡೆ ಹೊಂಡ, ತಗ್ಗು ಪ್ರದೇಶಗಳಿರುವ ಕಾರಣ ಬಸ್ ಗಾಗಿ ಕಾಯುವ ಪ್ರಯಾಣಿಕರು ಸಮಸ್ಯೆ ಅನುಭವಿಸಬೇಕಾಯಿತು. ಬಿ.ಸಿ.ರೋಡಿನ ಸರ್ವೀಸ್ ಬಸ್ ಗಳು ನಿಲ್ಲುವ ಜಾಗ ತಗ್ಗು ಪ್ರದೇಶದಲ್ಲಿದ್ದು, ಅಲ್ಲಿಯು ನೀರು ನಿಂತು ತೊಂದರೆ ಉಂಟಾಯಿತು. ರಸ್ತೆ ಅವ್ಯವಸ್ಥೆ, ನೀರು ಹರಿದು ಹೋಗಲು ಸಮರ್ಪಕ ಜಾಗವಿಲ್ಲದಿರುವ ಕುರಿತು ಮಾಧ್ಯಮಗಳು, ನಾಗರಿಕ ಸಂಘಟನೆಗಳು ಎಚ್ಚರಿಸಿದ್ದರೂ ಈ ಕುರಿತು ಸಮಯಕ್ಕೆ ಸರಿಯಾಗಿ ಕಾರ್ಯಯೋಜನೆ ಹಾಕಿಕೊಳ್ಳದ ಕಾರಣ ಈ ಮಳೆಗಾಲದಲ್ಲಿ ಆಗಾಗ್ಗೆ ಇಂಥ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಬೇಸಗೆಯಲ್ಲೂ ಸರ್ವೀಸ್ ರಸ್ತೆಯಲ್ಲಿ WATER SUPPLY
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ
ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬದಲಾಗಿಲ್ಲ ಬಿ.ಸಿ.ರೋಡ್ – ಮಳೆ ಬಂದರೆ ರಸ್ತೆ ತುಂಬಾ ಹೊಳೆ"