ಬಂಟ್ವಾಳದ ತುಳು ಶಿವಳ್ಳಿ ಸೇವಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಾರ್ವಜಿನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ’ಸ್ವಚ್ಛತೆಯತ್ತ ಒಂದು ಹೆಜ್ಜೆ – ಪ್ಲಾಸ್ಟಿಕ್ ಬಳಸದೇ ಪರಿಸರ ಉಳಿಸಿ’ ಎಂಬ ಘೋಷವಾಕ್ಯವನ್ನೊಳಗೊಂಡ ಬಟ್ಟೆ ಚೀಲವನ್ನು ಬಿಡುಗಡೆಗೊಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಮಣಿ ರಾಮಕುಂಜ ಹಾಗೂ ಭಾರತಿ ದಂಪತಿಗಳ ವೈವಾಹಿಕ ಜೀವನದ ರಜತ ಮಹೋತ್ಸವ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ಕೇವಲ ಆತ್ಮೋದ್ಧಾರಕ್ಕಾಗಿ ಮಾತ್ರ ಬಳಸಿಕೊಳ್ಳದೇ ಸಮಾಜಮುಖಿಯಾಗಿ ಆಚರಿಸಿದಾಗ ಸಾಮಾಜಿಕ ಪರಿಸರ ಹೆಚ್ಚು ದೃಢಗೊಳ್ಳುತ್ತದೆ. ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಬಹುಮುಖ್ಯವೆನಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ಮಾತನಾಡಿ, ಪರಿಸರ ಸಂರಕ್ಷಣೆ ಅನ್ನುವುದು ಘೋಷಣೆ ಮಾತ್ರವಾಗಿ ಉಳಿಯದೇ ಅದು ಕಾರ್ಯರೂಪಕ್ಕೆ ಇಳಿಯಬೇಕಾಗಿರುವುದು ಇಂದಿನ ತುರ್ತು ಮಾತ್ರವಲ್ಲ ಅವಶ್ಯವೂ ಹೌದು. ಪರಿಸರ ಸಂರಕ್ಷಣೆಯಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರೊ. ರಾಜಮಣಿ ರಾಮಕುಂಜ ಪ್ಲಾಸ್ಟಿಕ್ ಬಳಕೆ ಸಮಾಜಕ್ಕೆ ಅಂಟಿದ ಬಹುದೊಡ್ಡ ಜಾಡ್ಯ. ಸ್ವಚ್ಛತೆ, ಜಲಸಂರಕ್ಷಣೆ, ಮಣ್ಣಿನ ಫಲವತ್ತತೆ ಹಾಗೂ ಮಾನವನ ಆರೋಗ್ಯ ದೃಷ್ಟಿಯಿಂದ ಹಾನಿಯೆಸಗಬಲ್ಲ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲೇಬೇಕಾಗಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಭಾರತಿ ರಾಜಮಣಿ ಉಪಸ್ಥಿತರಿದ್ದರು.
Be the first to comment on "ಸ್ವಚ್ಛತೆಯತ್ತ ಒಂದು ಹೆಜ್ಜೆ, ಪ್ಲಾಸ್ಟಿಕ್ ಬಳಸದೆ ಪರಿಸರ ಉಳಿಸಿ"