ಶಾಲೆ ಉಳಿಸಲು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನಡೆಸಿದ ಹೋರಾಟ ಅನುಕರಣೀಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬುಧವಾರ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ತಾಯಿ ಮಡಿಲಿನಿಂದ ಮಗು ಶಾಲಾ ತರಗತಿಗೆ ಪರಿಕಲ್ಪನೆಯಡಿ ಶಾಲಾ ಆರಂಭೋತ್ಸವ ಕಾರ್ಯಕ್ರಮವನ್ನು ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆ ಮಂಜೂರುಗೊಳಿಸುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಹೊಸ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ನೀಡಿ ಶಾಲೆಗೆ ಬರ ಮಾಡಿಕೊಂಡರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ, ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಪಂಜಿಕಲ್ಲು ಗ್ರಾ.ಪಂ.ಸದಸ್ಯರಾದ ಪೂವಪ್ಪ ಮೆಂಡನ್, ರೂಪಶ್ರೀ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ ಸ್ವಾಗತಿಸಿದರು, ಸಹ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳ ಪಾಲಕರಿಗೆ ಪೂರಕ ಮಾಹಿತಿ ನೀಡಿದರು. ಪುರುಷೋತ್ತಮ ಅಂಚನ್, ನವೀನ್ ಸೇಸಗುರಿ, ಬಾಲಕೃಷ್ಣ ಜಿ., ಅಶ್ವತ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಶಾಲಾ ಹೊಸ ಬಸ್ಸಿಗೆ ಚಾಲನೆ ನೀಡಿ, ಕೀಲಿ ಕೈಯನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರ ಜಿಲ್ಲಾ ಪಂಚಾಯತಿ ಅನುದಾನದಡಿ ಮಂಜೂರುಗೊಂಡ ಪೀಠೋಪಕರಣಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಬಂಟ್ವಾಳದ ಅಂಬಿಕಾ ಮೆಟಲ್‌ನವರು ಉಚಿತವಾಗಿ ಕೊಡಮಾಡಿದ ಸ್ಟೀಲ್ ಬಟ್ಟಲನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
Be the first to comment on "ಶಾಲೆ ಉಳಿಸುವ ಹೋರಾಟ ಅನುಕರಣೀಯ: ರಾಜೇಶ್ ನಾಯ್ಕ್"