- ಲೋಕಸಭೆ ಚುನಾವಣೆ ಫಲಿತಾಂಶ 2019
- ಹರೀಶ ಮಾಂಬಾಡಿ, ಬಂಟ್ವಾಳನ್ಯೂಸ್
ಮತ ಎಣಿಕೆ ಕೇಂದ್ರದಲ್ಲಿ ಲೆಕ್ಕಾಚಾರಗಳು ಆರಂಭಗೊಳ್ಳುತ್ತಿದ್ದಂತೆ ಇತ್ತ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗುತ್ತಿದೆ. ಈಗಾಗಲೇ ಅನಧಿಕೃತವಾಗಿ ಬೆಟ್ಟಿಂಗ್ ಗಳು ನಡೆದಿರುವ ಕುರಿತು ವರ್ತಮಾನವಿದ್ದು, ಯಾರೂ ಅದನ್ನು ಬಹಿರಂಗಪಡಿಸುತ್ತಿಲ್ಲ. ಕಳೆದ ಒಂದು ವರ್ಷದಿಂದೀಚೆಗೆ ನಡೆದ ವಿದ್ಯಮಾನಗಳಿಂದಾಗಿ ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿ ಪಾಲಾಗುತ್ತದೆ ಎಂಬ ಆತ್ಮವಿಶ್ವಾಸ ಬಿಜೆಪಿಯವರಲ್ಲಿ ಇದೆಯಾದರೂ ಅಚ್ಚರಿಯ ಫಲಿತಾಂಶ ತರುತ್ತೇವೆ ನೋಡಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಯಾವುದಕ್ಕೂ ಕೆಲ ಗಂಟೆಗಳಲ್ಲಿ ಫಲಿತಾಂಶ ಹೊರಬಿದ್ದ ಮೇಲೆ ಯಾರು ವಿನ್ ಎಂಬುದು ಗೊತ್ತಾಗುತ್ತದೆ. ಅಲ್ಲಿಯವರೆಗೆ ಈ ಕ್ಷೇತ್ರಕ್ಕೊಂದು ಸುತ್ತು ಹಾಕೋಣ ಬನ್ನಿ.
2014ರ ಫಲಿತಾಂಶ
- ನಳಿನ್ ಕುಮಾರ್ ಕಟೀಲು- ಬಿಜೆಪಿ: 6,42,739
- ಜನಾರ್ದನ ಪೂಜಾರಿ – ಕಾಂಗ್ರೆಸ್: 4,99,030
- ಹನೀಫ್ ಖಾನ್ ಕೊಡಾಜೆ – ಎಸ್‌ಡಿಪಿಐ: 27,254
- ಯಾದವ ಶೆಟ್ಟಿ – ಸಿಪಿಎಂ: 9,394
- ನೋಟಾ: 7,109
- ಗೆಲುವಿನ ಅಂತರ: 1,43,709
ಈ ಬಾರಿ ಸ್ಪರ್ಧೆಗಿಳಿದವರು
ಈ ಬಾರಿ 13 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಳಿನ್ ಕುಮಾರ್ ಕಟೀಲ್ (ಬಿಜೆಪಿ), ಮಿಥುನ್ ಎಂ. ರೈ (ಕಾಂಗ್ರೆಸ್), ಎಸ್.ಸತೀಶ್ ಸಾಲಿಯಾನ್ (ಬಿಎಸ್‌ಪಿ), ಮಹಮ್ಮದ್ ಇಲಿಯಾಸ್ (ಎಸ್‌ಡಿಪಿಐ), ವಿಜಯ್ ಶ್ರೀನಿವಾಸ್ ಸಿ. (ಉತ್ತಮ ಪ್ರಜಾಕೀಯ ಪಾರ್ಟಿ), ಸುಪ್ರೀತ್ ಕುಮಾರ್ ಪೂಜಾರಿ (ಹಿಂದೂಸ್ತಾನ್ ಜನತಾ ಪಾರ್ಟಿ), ಅಬ್ದುಲ್ ಹಮೀದ್, ಅಲೆಕ್ಸಾಂಡರ್, ದೀಪಕ್ ರಾಜೇಶ್ ಕುವೆಲ್ಲೊ, ಮಹಮ್ಮದ್ ಖಾಲೀದ್, ಮ್ಯಾಕ್ಸಿಂ ಪಿಂಟೋ, ವೆಂಕಟೇಶ್ ಬೆಂಡೆ ಹಾಗೂ ಎಚ್.ಸುರೇಶ್ ಪೂಜಾರಿ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಈ ಬಾರಿಯ ಸ್ಥಿತಿ:
ಕರ್ನಾಟಕದ ಮಟ್ಟಿಗೆ ಹಿಂದುತ್ವದ ಪ್ರಯೋಗ ಶಾಲೆ ಎಂದು ಹೇಳಲಾಗುವ ದಕ್ಷಿಣ ಕನ್ನಡ ಬಿಜೆಪಿಯ ಗಟ್ಟಿನೆಲವಾಗಿದೆ ಎಂದು 1991ರ ಫಲಿತಾಂಶಗಳು ತೋರಿಸಿಕೊಟ್ಟಿವೆ. ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಮೈತ್ರಿ ಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ಈ ಬಾರಿ ಯುವ ಶಕ್ತಿಗೆ ಮೊರೆ ಹೋಗಿವೆ. ಪರಿಣಾಮ ಮಿಥುನ್ ರೈ ನಿಂತಿದ್ದಾರೆ. ಇಬ್ಬರೂ ಬಂಟ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ.
ಹಿಂದುತ್ವ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಇಮೇಜ್ ಆಧರಿಸಿಯೇ ಕಟೀಲ್ ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ದ.ಕ. ಕ್ಷೇತ್ರಕ್ಕೆ ಕೇಂದ್ರದಿಂದ 16 ಸಾವಿರ ಕೋಟಿ ರುಪಾಯಿಗೂ ಅಧಿಕ ಮೊತ್ತದ ಅನುದಾನ ತರಿಸಿದ್ದೇನೆ ಎಂದು ನಳಿನ್ ಕುಮಾರ್ ಹೇಳುತ್ತಾರೆ. ಮಂಗಳೂರಿನ ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನ ಮೇಲ್ಸೇತುವೆ ಕಾಮಗಾರಿ ಹಲವು ವರ್ಷಗಳಾಗಿದ್ದರೂ ಪೂರ್ಣಗೊಳ್ಳದಿರುವುದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು, ಟೋಲ್ ಗೇಟ್ ಮತ್ತಿತರ ವಿಚಾರಗಳನ್ನು ಮುಂದಿಟ್ಟು ಕಾಂಗ್ರೆಸ್ ಅವರನ್ನು ಲೇವಡಿ ಮಾಡುತ್ತಿವೆ. ಈಗಾಗಲೇ ಈ ವಿಚಾರದಲ್ಲಿ ಹಲವು ಟ್ರೋಲ್ ಗಳು ಬಂದಿವೆ.
2018ರ ವಿಧಾನಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿರುವುದೂ ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್.
ಹೊಸ ಹುಮ್ಮಸ್ಸಿನೊಂದಿಗೆ ಹಾಗೂ ಅಬ್ಬರದೊಂದಿಗೆ ಚುನಾವಣಾ ಕಣ ಪ್ರವೇಶಿಸಿದ ಕಾಂಗ್ರೆಸ್ ಯುವಕರನ್ನು ಬೆಳೆಸಿ ರಾಜಕೀಯದಲ್ಲಿ ಹೊಸ ಶಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಆರಂಭಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ 27,254 ಮತಗಳನ್ನು ಪಡೆದು ತೃತೀಯ ಸ್ಥಾನ ಪಡೆದಿತ್ತು. ಈ ಬಾರಿಯೂ ಆ ಪಕ್ಷ ಸ್ಪರ್ಧೆಗಿಳಿಸಿದೆ. ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಬೇಕು.
ಕಳೆದ ಬಾರಿ ಕೈತಪ್ಪಿದ ಬಂಟ್ವಾಳದಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸೀತೇ, ಮಂಗಳೂರು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡೀತೇ, ಬಿಜೆಪಿ ಈ ಬಾರಿಯೂ ಎಲ್ಲ ಏಳು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದೀತೇ ಎಂಬುದು ಕುತೂಹಲಕಾರಿ.
Be the first to comment on "ನಮ್ಮೂರಲ್ಲಿ ಯಾರು ವಿನ್? — ನಳಿನ್ ಅಥವಾ ಮಿಥುನ್?"