- ಬಂಟ್ವಾಳನ್ಯೂಸ್ ಕಾಳಜಿ
ಎಲ್ಲರಿಗೂ ಬೇಸಗೆಯಲ್ಲಿಯೇ ಮಳೆಯಾಗಲಿ ಎಂಬ ಹಂಬಲವಿದ್ದರೆ ಇವರ ಸ್ಥಿತಿ ಭಿನ್ನ. ಜೋಡುಪಾಲ, ಎರಡನೇ ಮೊಣ್ಣಂಗೇರಿ ಸಹಿತ ಕೊಡಗಿನಲ್ಲಿ ಕಳೆದ ಮಳೆಗಾಲದಲ್ಲಿ ಜಲಪ್ರಳಯದಿಂದ ತೊಂದರೆ ಅನುಭವಿಸಿದ ಜನರಿಗೆ ಅದೇ ರೀತಿ ಮಳೆ ಸುರಿದರೆ ಇನ್ನು ಎಲ್ಲಿಗೆ ಹೋಗುವುದು ಎಂಬ ಭೀತಿ.
ಏಕೆಂದರೆ ಸಮೃದ್ಧ ಕೃಷಿ ನಡೆಸುತ್ತಿದ್ದವರಿಗೆ ತೋಟವಿಲ್ಲ. ಬೀಗ ಜಡಿದ ಶಾಲೆಗಳು ಮತ್ತೆ ತೆರೆಯುವ ಗ್ಯಾರಂಟಿ ಇಲ್ಲ. ಇದುವರೆಗೂ ಪರಿಹಾರ ಸರಿಯಾಗಿ ತಲುಪಿಲ್ಲ. ರಾಜಕಾರಣಿಗಳು ಚುನಾವಣಾ ಪ್ರಚಾರದ ಒತ್ತಡ ಕಳೆಯಲು ರಿಲಾಕ್ಸ್ ಮೂಡ್ ನಲ್ಲಿದ್ದರೆ, ಜೋಡುಪಾಲದ ಜನರ ಆತಂಕ ತೀವ್ರವಾಗುತ್ತಿದೆ. ಇವರಿಗೆ ನೆಮ್ಮದಿಯಾಗಿರಲು ರೆಸಾರ್ಟ್ ಬೇಡ, ಪುಟ್ಟ ಆದರೆ ಭದ್ರ ಮನೆ ಬೇಕು. ಇಲ್ಲವಾದರೆ ಸ್ವಾವಲಂಬಿ ಜೀವನ ಸಾಗಿಸಲು ವ್ಯವಸ್ಥೆ. ಏಕೆಂದರೆ ಕಳೆದ ವರ್ಷ ಇವರೆಲ್ಲರೂ ಸ್ಥಿತಿವಂತರೇ, ನೆಮ್ಮದಿಯಲ್ಲಿ ಕಾಲ ಕಳೆದವರೇ ಆಗಿದ್ದವರು.
ಹಲವು ತಿಂಗಳು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕಳೆದು ಮನೆಗೆ ಮರಳಿ ಮನೆ, ಮಠ, ಅಂಗಡಿ, ಕೃಷಿ ಎಲ್ಲವನ್ನೂ ಮರಳಿ ಕಟ್ಟಲು ಪ್ರಾರಂಭಿಸಿದರೂ ಮತ್ತೆ ಎಲ್ಲವನ್ನು ತೊರೆದು ಬೇರೆಡೆಗೆ ಹೋಗಬೇಕಾದ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ ಇವರು. ಜೋಡುಪಾಲ, ಮೊಣ್ಣಂಗೇರಿ ಭಾಗದ ಹಲವು ಮನೆಗಳು ನಾಶವಾದ ಮತ್ತು ಬಿರುಕು ಬಿಟ್ಟ ಕಾರಣ ಅಲ್ಲಿ ಇರಲು ಸಾಧ್ಯವಿಲ್ಲ. ಹಲವರು ಮನೆ ಬಿಟ್ಟು ಸ್ಥಳಾಂತರಗೊಂಡಿದ್ದರೆ, ಹಿಂತಿರುಗಿ ಬಂದ ಹಲವರು ಬಾಡಿಗೆ ಮನೆ ಹುಡುಕುತ್ತಿದ್ದಾರೆ. ಅಡಕೆ ಮರಗಳಲ್ಲಿ ಅಡಕೆಯೇ ಇಲ್ಲ, ಹಿಂಗಾರ ಉದುರಿ ಬಿದ್ದು ಮರಗಳು ಬಾಡಿದಂತೆ ಕಾಣುತ್ತವೆ. ಕೆಲವೆಡೆ ಅಡಕೆ, ಕಾಫಿ ಗಿಡಗಳು ಸಾಯುತ್ತಿವೆ. ಭತ್ತ ಬೇಸಾಯವೂ ಇಲ್ಲದಂತಾಗಿದೆ.
ಹೌದು. ಜನಪ್ರತಿನಿಧಿಗಳು ಮನುಷ್ಯರೇ… ಅವರಿಗೆ ಒತ್ತಡಗಳಿರುವ ಕಾರಣ, ರಿಲ್ಯಾಕ್ಸ್ ಆಗಾಗ್ಗೆ ಬೇಕಾಗುತ್ತದೆ. ಆದರೆ ಪ್ರಾಕೃತಿಕ ವೈಪರೀತ್ಯದಲ್ಲಿ ಮನೆ, ಮಠ ಕಳೆದುಕೊಂಡ ನೂರಾರು ಮಂದಿಯೂ ಒತ್ತಡದಲ್ಲಿದ್ದಾರೆ. ಅವರಿಗೆ ನೆಮ್ಮದಿ ಕೊಡುವ ಕೆಲಸವನ್ನು ಈಗ ಮಾಡಬೇಕಾಗಿದೆ. ಅವರಿಗೆ ಬೇಕಾಗಿರುವುದು ಆಹಾರ ಪೊಟ್ಟಣಗಳಲ್ಲ, ಆಹಾರೋತ್ಪಾದನೆಗೆ ಬೇಕಾದ ನೆರವು, ಧೈರ್ಯ. ಇಂದು ಕೊಡಗಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.
Be the first to comment on "ಕೊಡಗಿನ ಜನರಿಗೂ ಬೇಕು ರಿಲಾಕ್ಸ್, ಮಳೆಗಾಲದ ಆತಂಕ ನಿವಾರಣೆ"