ಹಿರಿಯ ಪತ್ರಕರ್ತ ಉದಯಕುಮಾರ ಪೈ ಬರೆದ ಡಾ. ರಾಜ್ ನೆನಪಿನ ಸರಣಿ
ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿರಿ.
https://bantwalnews.com/2019/04/29/rajkumar-4/
ಕುಪ್ಪುರಾಜು ನಾಯ್ಡು ಅವರೊಬ್ಬರನ್ನು ಬಿಟ್ಟು ಮಿಕ್ಕ ಎಲ್ಲರಿಗೂ ಕ್ಯಾಮಿರಾ ಮುಂದೆ ಅಭಿನಯಿಸುವುದು ಹೊಸ ಅನುಭವ. ಹೀಗಾಗಿ ಸೆಟ್ ನಲ್ಲೂ ಕೆಲವು ಬಾರಿ ತಾಲೀಮು ನಡೆಸಿ, ಟೆಲಿ ನಾಟಕ ಚಿತ್ರೀಕರಣಕ್ಕೆ ಅಣಿಯಾದೆವು. ಇಷ್ಟಾಗಿಯೂ ಕೆಲವು ಸಂದರ್ಭಗಳಲ್ಲಿ ಎಡವಟ್ಟುಗಳಾದವು. ಇದರಿಂದ ಹಲವು ರೀಟೇಕ್ ಗಳಾದವು. ಇದರಿಂದ ಕ್ಯಾಮಿರಾ ಮನ್ ಗೆ ಸಿಟ್ಟು ನೆತ್ತಿಗೇರಿತು. ‘ಕಸಬು ಗೊತ್ತಿಲ್ಲದವರನ್ನು ಕರೆ ತಂದು ನಮ್ಮ ತಲೆ ಏಕೆ ತಿನ್ನುತ್ತೀರಿ ? ಇದರಿಂದ ಸಮಯ, ಫಿಲಂ ಇದೆಲ್ಲ ಎಷ್ಟು ದಂಡವಾಗುತ್ತದೆ ಎಂಬ ಅಂದಾಜು ನಿಮಗಿದೆಯೇ ?’ ಎಂದು ಅಬ್ಬರಿಸಿ ಕ್ಯಾಮಿರಾ ಬಿಟ್ಟು ಅಲ್ಲೇ ದೂರದಲ್ಲಿದ್ದ ಕುರ್ಚಿಯಲ್ಲಿ ಹೋಗಿ ಕುಳಿತುಬಿಟ್ಟರು. ನಾವೆಲ್ಲ ದಂಗಾದೆವು. ಕುಪ್ಪುರಾಜು ಹೋಗಿ ಅವರನ್ನು ಪುಸಲಾಯಿಸಿ ಪುನಃ ಕರೆತಂದರು. ಒಂದು ಐದು ನಿಮಿಷ ಸುಧಾರಿಸಿಕೊಂಡು, ಮರಳಿ ಮತ್ತೊಮ್ಮೆ ತಾಲೀಮು ಮಾಡಿ ಚಿತ್ರೀಕರಣಕ್ಕೆ ಸಿದ್ಧರಾದೆವು.
ಆದರೆ ಕಸಬು ಗೊತ್ತಿಲ್ಲದವರು ಎಃದು ಹೇಳಿದ ಮಾತು ನಮ್ಮನ್ನೆಲ್ಲ ಕಂಗೆಡಿಸಿದ್ದು, ಇನ್ನೇನಾದರೂ ಎಡವಟ್ಟಾದರೆ ಗತಿ ಏನು ಎಂಬ ಭಯ ಕಾಡುತ್ತಿತ್ತು. ಈ ಭಯ ನನ್ನ ಭಾಗದ ಚಿತ್ರೀಕರಣದ ಸಂದರ್ಭ ಪ್ರತಿಫಲಿಸಿತು. ಈ ಅಚಾತುರ್ಯ ಸರಿಪಡಿಸಲು ಕುಪ್ಪುರಾಜು ಅವರು ‘ಒಂದು ರೀಟೇಕ್ ಮಾಡೋಣವೇ?’ ಎಂದು ನಯವಾಗಿ ಕೇಳಿದರು. ಆದರೆ ಆತ ‘ಅದೆಲ್ಲ ಸಾಧ್ಯವಿಲ್ಲ. ಸುಮ್ಮನೇ ಫಿಲಂ ದಂಡ. ಜತೆಗೆ ಸಮಯಕ್ಕೆ ಸರಿಯಾಗಿ ಸೆಟ್ ಬಿಟ್ಟುಕೊಡಬೇಕು. ಅದೇನೂ ಅಷ್ಟು ದೊಡ್ಡ ಆಭಾಸವಲ್ಲ’ ಎಂದು ಖಂಡತುಂಡವಾಗಿ ನಿರಾಕರಿಸಿದರು. ಹೆಚ್ಚಿಗೆ ಚರ್ಚೆಗಿಳಿಯುವುದಾಗಲಿ ಅಥವಾ ಕನ್ನಡ ವಿಭಾಗದ ಮುಖ್ಯಸ್ಥರಾದ ಯಮುನಾಬಾಯಿ ಅವರಲ್ಲಿ ಹೇಳಿ ಸರಿಪಡಿಸಲು ಮುಂದಾದರೆ, ಅಸಹಕಾರ ತೋರಿ ಎಲ್ಲವೂ ಹಾಳಾದರೆ ಕಷ್ಟ ಎಂದು ಭಾವಿಸಿ, ಅತೃಪ್ತಿಯಲ್ಲೇ ಟೆಲಿ ನಾಟಕದ ಚಿತ್ರೀಕರಣ ಮುಗಿಸಿದೆವು. ನಾವು ಈ ವೃತ್ತಿಯಲ್ಲಿ ಪಳಗಿದವರಲ್ಲ, ಆದರೆ ಕ್ಯಾಮಿರಾ ಮನ್ ಸ್ವಲ್ಪ ಪ್ರೋತ್ಸಾಹದ ಮಾತನಾಡಿ ವೃತ್ತಿಪರತೆ ತೋರಬಹುದಿತ್ತೋ ಏನೋ ! ಆ ನ್ಯೂನತೆ ಹಾಗೇ ಉಳಿಯಿತು.
ಅದೇನೇ ಇರಲಿ, ಮದರಾಸು ದೂರದರ್ಶನ ಕೇಂದ್ರದ ಕನ್ನಡ ವಿಭಾಗದ ಉದ್ಘಾಟನೆಗೆ ವರನಟರನ್ನು ಕರೆತರಬೇಕೆಂಬುದು ವಿಭಾಗದ ಮುಖ್ಯಸ್ಥರಾದ ಯಮುನಾಬಾಯಿ ಅವರ ಆಕಾಂಕ್ಷೆಯಾಗಿತ್ತು. ಇದರಿಂದ ನನಗೆ ಸಂತೋಷವಾಗಿತ್ತಾದರೂ, ಇಡೀ ನಾಟಕಕ್ಕೆ ನಾನು ದೃಷ್ಟಿ ಬೊಟ್ಟಿನಂತಿರುವುದನ್ನು ನೆನೆದು ಕಸಿವಿಸಿಗೊಂಡೆ. ಏನೂ ಮಾಡುವಂತಿರಲಿಲ್ಲ.
ಅಂದು ರಾಜಕುಮಾರ ಅವರಿಗೆ ಬಿಡುವಿಲ್ಲದಷ್ಟು ಚಟುವಟಿಕೆ. ನಿರಂತರ ಚಿತ್ರೀಕರಣದ ಕಾರಣದಿಂದ ಮದರಾಸಿನ ಮನೆಗೆ ಬಂದು ಅವರು ಬಂದು ತುಂಬ ಕಾಲವಾಗಿತ್ತಂತೆ. ಬೆಂಗಳೂರಿನಲ್ಲಿ ಅವರು ಇಳಿದುಕೊಳ್ಳುವ ಹೈಲ್ಯಾಂಡ್ಸ್ ಹೊಟೇಲಿಗೆ ಸಂಪರ್ಕಿಸಿದರೂ, ಚಿತ್ರೀಕರಣದಲ್ಲಿದ್ದಾರೆ, ಯಾವಾಗ ಬರುತ್ತಾರೋ ತಿಳಿಯದು ಎಂದು ಉತ್ತರಿಸುತ್ತಿದ್ದರು. ಕೊನೆಗೆ ರಾಜಕುಮಾರ ಮನೆಗೆ ಹಾಗೂ ಮದರಾಸು ಆಕಾಶವಾಣಿಯಲ್ಲಿ ‘ಹೂಮಳೆ’ ಕಾರ್ಯಕ್ರಮ ನಡೆಸುತ್ತಿದ್ದ (ಅವರ ಹೆಸರು ದೀಪಕ್ ಎಂದು ಭಾವಿಸಿದ್ದೇನೆ) ತಾರೆ ಪಂಡರೀಬಾಯಿ ಅವರ ದೂರದ ಬಂಧು ಅವರಲ್ಲಿ ತಿಳಿಸಿ, ಅಲ್ಲಿನ ಸ್ಟುಡಿಯೋಗಳಿಗೆ ಸುದ್ದಿ ಮುಟ್ಟಿಸಿ ರಾಜಕುಮಾರ ಬರುವುದಿದ್ದರೆ ತಿಳಿಸಬೇಕು ಎಂದು ಸೂಚನೆ ನೀಡಲಾಗಿತ್ತು. ರಾಜಕುಮಾರ ಅವರನ್ನು ಕರೆ ತರುವಲ್ಲಿ ನನ್ನ ಪಾತ್ರ ಏನೇನೂ ಇರಲಿಲ್ಲ.
ವಿಜಯಚಿತ್ರ, ರೂಪತಾರಾ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ.
Be the first to comment on "ನಾನು ನೋಡಿದ ರಾಜಕುಮಾರ"