ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಇಂದು ಮಧ್ಯಾಹ್ನ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎ.13ರಂದು ನಗರದಲ್ಲಿ ವಾಹನ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಎ.13ರಂದು ಬೆಳಗ್ಗೆ 8ರಿಂದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ನಿರ್ಗಮಿಸುವ ವರೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ನಗರದ ನೆಹರೂ ಮೈದಾನದ ವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನಗಳಿಗೆ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಗರದಲ್ಲಿ 5 ಎಸ್‌ಪಿ/ಡಿಸಿಪಿ, 10 ಡಿವೈಎಸ್‌ಪಿ/ಎಸಿಪಿ, 36 ಪಿಐಗಳು, 67 ಪಿಎಸ್‌ಐ, 147 ಎಎಸ್‌ಐ, 1207 ಎಚ್‌ಸಿ/ಪಿಸಿ ಸಹಿತ ಒಟ್ಟು 1,472 ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 92 ಎಚ್‌ಐ, 5 ಕೆಎಸ್‌ಆರ್‌ಪಿ ತುಕಡಿ, 19 ಸಿಎಆರ್ ತುಕಡಿ ಹಾಗೂ 2 ಸಿಆರ್‌ಪಿಎಫ್ ತುಕಡಿಗಳ ಅಧಿಕಾರಿ ಮತ್ತು ಸಿಬಂದಿಗಳನ್ನು ನೇಮಿಸಲಾಗಿದೆ. ಜತೆಗೆ, 4 ಎಎಸ್‌ಸಿ ತಂಡ, 1 ಬಿಡಿಎಸ್ ತಂಡ, 30 ಡಿಎಫ್‌ಎಂಡಿ/ 30 ಎಚ್‌ಎಚ್‌ಎಂಡಿಯನ್ನು ಕಾರ್ಯಕ್ರಮ ನಡೆಯುವ ಸ್ಥಳ, ವಿಮಾನ ನಿಲ್ದಾಣ ಹಾಗೂ ವಿವಿಐಪಿ ಸಂಚರಿಸುವ ಸ್ಥಳದ ತಪಾಸಣೆಗೆ ನೇಮಿಸಲಾಗಿದೆ. ನಗರದ ಬಂದೋಬಸ್ತು ಕರ್ತವ್ಯದಲ್ಲಿ ಒಟ್ಟು 34 ಸೆಕ್ಟರ್ ಮೊಬೈಲ್‌ಗಳು ಹಾಗೂ 144 ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್ ಪಾಯಿಂಟ್‌ಗಳು ಕಾರ್ಯ ನಿರ್ವಹಿಸಲಿದೆ.
- ಉಡುಪಿ-ಮುಲ್ಕಿ-ಸುರತ್ಕಲ್ ಹಾಗೂ ಕಟೀಲು – ಬಜ್ಪೆ-ಕಾವೂರು-ಕೂಳೂರು-ಕೊಟ್ಟಾರಚೌಕಿ ಮುಖಾಂತರ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಕರಾವಳಿ ಉತ್ಸವ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ ಮತ್ತು ಕೂಳೂರು ಗೋಲ್ಡ್ ಫಿಂಚ್ ಸಿಟಿ ಗ್ರೌಂಡ್ ನಲ್ಲಿ ಹಾಗೂ ಕಾರುಗಳಿಗೆ ಮಣ್ಣಗುಡ್ಡೆ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
- ಕಾರ್ಕಳ-ಮೂಡುಬಿದಿರೆ-ಸುಳ್ಯ-ಪುತ್ತೂರು-ಬೆಳ್ತಂಗಡಿ-ಬಂಟ್ವಾಳ-ಬಿ.ಸಿ.ರೋಡ್‌ನಿಂದ ನಂತೂರು ಮೂಲಕ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಬಂಟ್ಸ್ ಹಾಸ್ಟೆಲ್ ನ ರಾಮಕೃಷ್ಣ ಶಾಲಾ ಮೈದಾನ, ಮಲ್ಲಿಕಟ್ಟೆಯ ಕದ್ರಿ ಮೈದಾನ, ಪದವು ಪ್ರೌಢಶಾಲಾ ಮೈದಾನ ಮತ್ತು ಆಯಗ್ನೆಸ್ ಶಾಲಾ ಮೈದಾನ ಹಾಗೂ ಕಾರುಗಳಿಗೆ ಬಲ್ಮಠದ ಶಾಂತಿ ನಿಲಯ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
- ಕಾಸರಗೋಡು, ಉಪ್ಪಳ, ಉಳ್ಳಾಲ, ಕೊಣಾಜೆ, ದೇರಳಕಟ್ಟೆ, ತೊಕ್ಕೊಟ್ಟಿನಿಂದ ಪಂಪ್‌ವೆಲ್-ಕಂಕನಾಡಿ-ಮಂಗಳಾದೇವಿ ಮುಖಾಂತರ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಎಮ್ಮೆಕೆರೆ ಮೈದಾನ ಮತ್ತು ನಂದಿಗುಡ್ಡೆಯ ವಾಮನ ನಾಯ್ಕೆ ಮೈದಾನ ಹಾಗೂ ಕಾರುಗಳಿಗೆ ಮೋರ್ಗನ್ಸ್ ಗೇಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ
Be the first to comment on "ಮೋದಿ ಮಂಗಳೂರಿಗೆ: ಪಾರ್ಕಿಂಗ್, ಸಂಚಾರ ವ್ಯವಸ್ಥೆ ಮಾರ್ಪಾಡು"