ಇತಿಹಾಸವೆಂದರೆ ಕೇವಲ ರಾಜ ಮಹಾರಾಜರ ಸಾಧನೆ ಸಾಹಸಗಳ ದಾಖಲೆ ಎಂದು ಭ್ರಮಿಸಿದ ಕಾಲವೊಂದಿತ್ತು. ಆದರೆ ಬದಲಾದ ಈ ಕಾಲ ಘಟ್ಟದಲ್ಲಿ ಇತಿಹಾಸದ ಬಗೆಗಿನ ದೃಷ್ಟಿಕೋನವೂ ಬದಲಾಗಿದೆ. ಸಾಮಾನ್ಯರೂ ಇತಿಹಾಸದ ಒಂದು ಭಾಗ. ಅವರ ಬೇಕು ಬೇಡಗಳ, ದುಃಖ ದುಮ್ಮಾನಗಳ ಅಥವಾ ಅವರ ಕೊಡುಗೆಗಳು ದಾಖಲಾಗದೇ ಹೋದಲ್ಲಿ ಅದು ಪರಿಪೂರ್ಣ ಇತಿಹಾಸವೆನಿಸಲಾರದು, ಎಂದು ಪುತ್ತೂರಿನ ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರು ಹೇಳಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ.ತುಕಾರಾಂ ಪೂಜಾರಿ ಹಾಗೂ ಡಾ.ಆಶಾಲತ ಸುವರ್ಣ ಅವರು ಸಂಪಾದಿಸಿ ಪ್ರಕಟಿಸಿದ ಭೌತಿಕ ಶೋಧ ಸ್ವರೂಪ ಮತ್ತು ತಾತ್ವಿಕತೆ ಎಂಬ ಕೃತಿಯನ್ನು ಭಾನುವಾರ ಪೆರ್ನೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಈ ಕೃತಿಯು ಈವರೆಗೆ ಕಡೆಗಣಿಸಲ್ಪಟ್ಟ ಇತಿಹಾಸಕ್ಕೆ ಪೂರಕ ಆಕರವಾಗಬಲ್ಲ ಭೌತಿಕ ವಸ್ತುಗಳ ಮತ್ತು ಮೌಖಿಕ ಇತಿಹಾಸದ ಮಹತ್ವವನ್ನು ಎತ್ತಿ ಹಿಡಿದಿದೆ ಎಂದರು.
ಕೃತಿಯ ಕುರಿತಾಗಿ ಮಾತನಾಡಿದ ಬಿ.ಸಿ.ರೋಡಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಭಟ್ ಅಜೆಕ್ಕಳ ಮಾತನಾಡುತ್ತಾ, ದಾಖಲೆಗಳ ಆಧಾರದಲ್ಲಿ ರಚಿಸಲಾಗುವ ಇತಿಹಾಸದಲ್ಲಿ ಘಟನಾವಳಿಗಳಿಗಷ್ಟೇ ಪ್ರಾಧಾನ್ಯತೆ ಸೀಮಿತವಾಗಿರುತ್ತದೆ. ಈ ಸಾಂಪ್ರದಾಯಿಕ ಮಾದರಿಯ ಇತಿಹಾಸದ ರಚನೆಯ ಹೊರತಾಗಿಯೂ ಚರಿತ್ರೆ ರಚನೆ ಸಾಧ್ಯ ಎಂಬುವುದನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ವಿವಿಧ ವಿದ್ವಾಂಸರುಗಳ ಪ್ರಬುದ್ಧ ಲೇಖನಗಳನ್ನೊಳಗೊಂಡ ಈ ಕೃತಿಯು ಒಂದು ಅಮೂಲ್ಯ ಸಂಶೋಧನಾ ಕೃತಿಯಾಗಿ ಮೂಡಿಬಂದಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರಾದ ಡಾ.ಗಣೇಶ್ ಅಮೀನ್ ಸಂಕಮಾರ್, ವಿವೇಕಾನಂದ ಕಾಲೇಜಿನ ಉಪನ್ಯಾಸಕರಾದ ಡಾ.ಶ್ರೀಷ ಕುಮಾರ್ ,ಕೆ.ಎಂ.ಬಾಲಕೃಷ್ಣ, ಕೃತಿಯ ಸಂಪಾದಕರಾದ ಪ್ರೊ.ತುಕಾರಾಂ ಪೂಜಾರಿ ಮತ್ತು ಡಾ ಆಶಾಲತಾ ಸುವರ್ಣ, ಉಪಸ್ಥಿತರಿದ್ದರು. ಮಹಾಬಲೇಶ್ವರ ಹೆಬ್ಬಾರ್ ಸ್ವಾಗತಿಸಿ ವಂದಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಕ್ಯುರೇಟರ್ ಕು.ನಯನ ನಿರೂಪಿಸಿದರು.
Be the first to comment on "ಸಾಮಾನ್ಯರೂ ಇತಿಹಾಸದ ಒಂದು ಭಾಗ, ಅವರ ಕೊಡುಗೆಯ ಅಧ್ಯಯನ ಅಗತ್ಯ: ಡಾ. ಪೀಟರ್ ವಿಲ್ಸನ್ ಪ್ರಭಾಕರ್"