ಕುರ್ನಾಡು: ಬಂಟ್ವಾಳ ತಾಲೂಕು ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕದ ಪ್ರಧಾನ ಕಾರ್ಯಕ್ರಮಗಳು ಏ.1, ಸೋಮವಾರ ಸಂಪನ್ನಗೊಳ್ಳಲಿವೆ. ಸೋಮವಾರ ಬೆಳಗ್ಗೆ 6.29ರಿಂದ 7.13ರ ತನಕ ಒದಗುವ ದನಿಷ್ಠ ನಕ್ಷತ್ರ ಮೀನರಾಶಿಯಲ್ಲಿ ಅಷ್ಟಪಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ನೆರವೇರಲಿವೆ.
ಮಧ್ಯಾಹ್ನ ಮಹಾಪೂಜೆ, ಮಹಾಅನ್ನಸಂತರ್ಪಣೆ, ರಾತ್ರಿ ಪೂಜೆ, ರಾತ್ರಿ 7.30ರಿಂದ ಶ್ರೀಭೂತಬಲಿ, ನೃತ್ಯಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆಯೊಂದಿಗೆ ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯುಕ್ತ ಬೆಳಗ್ಗೆ 11ರಿಂದ ಕೊಳಲು ಸಂಗೀತ ನಾದತರಂಗ, ಅಪರಾಹ್ನ 2ಕ್ಕೆ ಯಕ್ಷಗಾನ ತಾಳಮದ್ದಳೆ ಭೀಷ್ಮವಿಜಯ, ಸಂಜೆ 5ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 10.30ರಿಂದ ತುಳು ಸಾಂಸಾರಿಕ ಹಾಸ್ಯ ನಾಟಕ ಪೊಪ್ಪ ಪ್ರದರ್ಶನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯುಕ್ತ ಶನಿವಾರ ರಾತ್ರಿ ಕುರ್ನಾಡು ಗುತ್ತು ಎಚ್.ರಾಮಯ್ಯ ನಾಯ್ಕ್ ವೇದಿಕೆಯಲ್ಲಿ ಕಿಶೋರಿ ಡಿ.ಶೆಟ್ಟಿ ಅವರ ಶ್ರೀಲಲಿತೆ ಕೂಟದವರು ಪ್ರದರ್ಶಿಸಿದ ತಿರುಪತಿ ತಿಮ್ಮಪ್ಪೆ ಪೌರಾಣಿರೆ ನಾಟಕ ಅಪಾರ ಜನಮೆಚ್ಚುಗೆಗೆ ಪಾತ್ರವಾಯಿತು.
ಭಾನುವಾರ ಮುಂಜಾನೆ ಮಂಜುಳಾ ಜಿ. ರಾವ್ ಇರಾ ಅವರಿಂದ ಹರಿಕಥೆ, ಅಪರಾಹ್ನ ಯಕ್ಷ ನಾಟ್ಯ ವೈಭವ ಹಾಗೂ ರಾತ್ರಿ ಡಾ.ಕದ್ರಿಗೋಪಾಲನಾಥ್ ಮತ್ತು ಸುರಮಣಿ ಪಂಡಿತ್ ಪ್ರವೀಮ್ ಗೋಡ್ಖಿಂಡಿ ಅವರಿಂದ ಸ್ಯಾಕ್ಸೋಫೋನ್ ಬಾನ್ಸುರಿ ಜುಗಲ್ ಬಂಧಿ ಪ್ರದರ್ಶನಗಳು ನಡೆದವು.
ಕುರ್ನಾಡು ಬ್ರಹ್ಮಕಲಶೋತ್ಸವದಲ್ಲಿ ಅತಿಥಿಗಳು, ಗಣ್ಯರಿಗೆ ಹೂವಿನ ಹಾರ, ರೆಡಿಮೇಡ್ ಸ್ಮರಣಿಕೆಗಳನ್ನು ನೀಡುತ್ತಿಲ್ಲ. ಸಭಾ ಕಾರ್ಯಕ್ರಮದ ಎಲ್ಲಾ ಅತಿಥಿಗಳಿಗೆ, ಸೇವಾಕರ್ತರಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ತಂಡಗಳಿಗೆ, ಭಜನಾ ಸೇವೆ ನೀಡುವ ಮಂಡಳಿಯವರಿಗೆ ಭಗವದ್ಗೀತೆ ಗ್ರಂಥ ಹಾಗೂ ಶಾಲನ್ನು ಗೌರವಪೂರ್ಕವಾಗಿ ನೀಡಲಾಗುತ್ತಿದೆ. ಈ ಮೂಲಕ ಜ್ಞಾನ ಪ್ರಸಾರ ಕಾರ್ಯ, ಜೊತೆಗೆ ಕ್ಷೇತ್ರದ ವತಿಯಿಂದ ಅರ್ಥಪೂರ್ಣ ಸ್ಮರಣಿಕೆಯನ್ನು ನಾಡಿನ ಪ್ರತಿಭಾನ್ವಿತರು, ಹಿರಿಯರು, ಗಣ್ಯರಿಗೆ ತಲುಪಿಸಿದ ಸಾರ್ಥಕತೆಯೂ ದೇವಸ್ಥಾನದ ಆಡಳಿತ ಮಂಡಳಿಗಿದೆ.
Be the first to comment on "ಕುರ್ನಾಡು ಸೋಮನಾಥೇಶ್ವರ ದೇವಸ್ಥಾನದಲ್ಲಿ ನಾಳೆ ಸಹಸ್ರಕುಂಭಾಭಿಷೇಕ"