ಬಿ.ಸಿ.ರೋಡಿನ ಕೈಕಂಬ ಪೊಳಲಿ ಮಹಾದ್ವಾರದಿಂದ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆಯಲ್ಲಿ ಮತದಾನ ಮಹತ್ವ ಸಾರುವ ಘೋಷಣೆಗಳನ್ನು ಕೂಗುತ್ತಾ ಕಾಲ್ನಡಿಗೆ ಜಾಥಾ, ಬಳಿಕ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ವೃತ್ತಾಕಾರದ ಮಾನವ ಸರಪಳಿ ಹಾಗೂ ಮತದಾನದ ಪ್ರತಿಜ್ಞೆ, ಜಾಗೃತಿ ಗೀತೆ ಮತ್ತು ವಿವಿ ಪ್ಯಾಟ್ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡುವ ಕಾರ್ಯ ಶನಿವಾರ ಬಿ.ಸಿ.ರೋಡಿನಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ಬಂಟ್ವಾಳ ತಾಲೂಕು ಪಂಚಾಯತ್ ವತಿಯಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಮತದಾನ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮಕ್ಕೆ ವಕೀಲರ ಸಂಘ (ರಿ) ಬಂಟ್ವಾಳ, ಆಟೊ ಚಾಲಕ ಮಾಲೀಕರ ಸಂಘ (ಬಿಎಂಎಸ್) (ರಿ) ಬಂಟ್ವಾಳ, ಗ್ಯಾರೇಜು ಮಾಲೀಕರ ಸಂಘ ಬಂಟ್ವಾಳ, ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ (ರಿ) ಬಂಟ್ವಾಳ ಬಿ.ಸಿರೋಡ್, ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ, ಡ್ರೈವರ್ ಅಸೋಸಿಯೇಶನ್ ಬಂಟ್ವಾಳ, ಸೋಶಿಯಲ್ ಡೆಮಾಕ್ರಾಟಿಕ್ ಆಟೊ ಚಾಲಕರ ಯೂನಿಯನ್ (ರಿ), ಬಂಟ್ವಾಳ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗ ನೀಡಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಅವರು ಮತದಾನದ ಮಹತ್ವದ ಕುರಿತು ಮಾಹಿತಿ ನೀಡಿ, ವಿವಿ ಪ್ಯಾಟ್ ಮತ್ತು ಮತಯಂತ್ರದ ವಿಚಾರವನ್ನು ವಿವರಿಸಿದರು. ಬಳಿಕ ಮಾದರಿ ಮತಯಂತ್ರವನ್ನು ಒತ್ತುವುದರ ಮೂಲಕ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು. ಈ ಸಂದರ್ಭ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್, ಸಹಾಯಕ ಚುನಾವಣಾಧಿಕಾರಿ ಮಹೇಶ್, ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ, ಬಂಟ್ವಾಳ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಇಂಜಿನಿಯರ್ ಅರುಣ್, ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಮೇಬಲ್ ಡಿಸೋಜ, ಪುರಸಭೆ ಪರಿಸರ ಇಂಜಿನಿಯರ್ ಯಾಸ್ಮಿನ್, ತಾಪಂ ಸಹಾಯಕ ನಿರ್ದೇಶಕ ಡಿ.ಪ್ರಶಾಂತ್ ಬಳಂಜ, ತಾಪಂ ವಲಯ ಮೇಲ್ವಿಚಾರಕ ಕುಶಾಲಪ್ಪ, ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಶರಣಗೌಡ ಪಾಟೀಲ್, ಎಸ್ಸೈಗಳಾದ ಚಂದ್ರಶೇಖರ್, ಪ್ರಸನ್ನ,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ವಿವಿಧ ಸಂಘ, ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಾಥಾಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಚಾಲನೆ ನೀಡಿದರು. ಈ ಸಂದರ್ಭ ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಜರಿದ್ದರು. ಬಳಿಕ ಕಾಲ್ನಡಿಗೆಯಲ್ಲಿ ಜಾಥಾ ಬಿ.ಸಿ.ರೋಡಿನವರೆಗೆ ಸಾಗಿತು. ಈ ಸಂದರ್ಭ ಮತದಾನದ ಮಹತ್ವದ ಕುರಿತು ಸಂದೇಶಗೀತೆಗಳನ್ನು ಹಾಡಲಾಯಿತು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
ಜಾಗೃತಿ ಗೀತೆ ಹಾಡಿದ ಪತ್ರಕರ್ತರು
ಮತದಾರ ಕೇಳೊ ಇಲ್ಲಿ, ನಾವ್ ಹೇಳೊ ಮಾತ ಕಿವಿಗೊಟ್ಟು ಕೇಳೊ ಇಲ್ಲಿ… ಎಂದು ನಾನಾ ವಿಚಾರಗಳು ಇರುವ ಜಾಗೃತಿ ಗೀತೆಯನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಬಿ.ಸಿ.ರೋಡಿನಲ್ಲಿ ಸಂಘಟಿಸಿದ ಮಾನವ ಸರಪಳಿಯಲ್ಲಿ ಮಧ್ಯೆ ಹಾಡಿದರು. ರಂಗಕರ್ಮಿಯೂ ಆಗಿರುವ ಪತ್ರಕರ್ತ ಮೌನೇಶ ವಿಶ್ವಕರ್ಮ ಹಾಡಿಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹರೀಶ ಮಾಂಬಾಡಿ, ಜತೆ ಕಾರ್ಯದರ್ಶಿ ಅಬ್ದುರ್ರಹಮಾನ್ ತಲಪಾಡಿ, ಕೋಶಾಧಿಕಾರಿ ಯಾದವ ಕುಲಾಲ್ ಅಗ್ರಬೈಲ್, ಹಿರಿಯ ಪತ್ರಕರ್ತರಾದ ವೆಂಕಟೇಶ್ ಬಂಟ್ವಾಳ, ರತ್ನದೇವ್ ಪುಂಜಾಲಕಟ್ಟೆ, ಸಂದೀಪ್ ಸಾಲ್ಯಾನ್, ಸಾಥ್ ನೀಡಿದರು. ನೀವು ಹಾಕುವ ಒಂದು ಮತ ಕಾಯುವುದು ದೇಶದ ಹಿತ ಎಂಬ ಸಂದೇಶ ಹಾಡಿನಲ್ಲಡಗಿದೆ.
ಈ ಸಂದರ್ಭ ವಿವಿ ಪ್ಯಾಟ್ ಮತ್ತು ಮತಯಂತ್ರದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಬಿ.ಸಿ.ರೋಡ್ ನಲ್ಲಿರುವ ಪುರಸಭಾ ಬಸ್ ನಿಲ್ದಾಣದಲ್ಲಿ ನಡೆಸಲಾಯಿತು.
Be the first to comment on "ಕಾಲ್ನಡಿಗೆ ಜಾಥಾ, ಮಾನವ ಸರಪಳಿ, ಜಾಗೃತಿ ಗೀತೆಗಳ ಮೂಲಕ ಮತದಾನ ಮಹತ್ವ ಅರಿವು"