ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳಾಲು ಭಾಗದಲ್ಲಿ 81 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿದರು.
ಕುಳಾಲು ವಾರಾಹಿ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ಬಾರಿ ನಾನು ಶಾಸಕನಾಗಿದ್ದ ವೇಳೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ಇಂದು ನನ್ನನ್ನು ಉದ್ಘಾಟನೆಗೆ ಆಹ್ವಾನಿಸುತ್ತಿದ್ದಾರೆ. ಕುಳಾಲು–ಬೊಳ್ಪಾದೆ–ಕನ್ಯಾನ ಸಂಪರ್ಕ ರಸ್ತೆ ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗಿದ್ದು, ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ. ಕೆಲವು ರಸ್ತೆಗಳಿಗೆ ಕಾನೂನು ತೊಡಕು ಇದ್ದರೂ ಮಾನವೀಯತೆ ದೃಷ್ಟಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ಕುಳಾಲು–ಕುಂಟ್ರಕಳ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ, ಮಡ್ಯಲಮಾರ್ ರಸ್ತೆ, ಕುದ್ರಿಯಾ–ಪಾದೆಕರಿಯ ರಸ್ತೆ, ಮುಂಡಾಜೆ–ಕದುಮಜೆಕೋಡಿ ರಸ್ತೆಯನ್ನು ಉದ್ಘಾಟಿಸಲಾಯಿತು. ಬದಿಯಡ್ಕ–ಕಾನ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ, ಬೊಳ್ಪಾದೆ–ಕೊಡಂಗೆ ರಸ್ತೆಗೆ ಇದೇ ಸಂದರ್ಭ ಶಿಲಾನ್ಯಾಸ ನಡೆಸಿದರು. ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಕುಳ್ಯಾರು ನಾರಾಯಣ ರೈ, ಗ್ರಾಮ ಪಂಚಾಯಿತಿ ಸದಸ್ಯರಾದ ಗುರುವಪ್ಪ ಮುಗೇರ, ಲೀನಾ ಡಿಸೋಜ, ವೇದವತಿ, ಪುಷ್ಪಲತಾ, ಪವಿತ್ರ ಪೂಂಜ ಮೊದಲಾದವರು ಉಪಸ್ಥಿತರಿದ್ದರು.
ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ವಂದಿಸಿದರು. ಮಂಜುನಾಥ ಶೆಟ್ಟಿ ಪ್ರಾರ್ಥಿಸಿದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Be the first to comment on "ಕುಳಾಲು: 81 ಲಕ್ಷ ರೂ ಅನುದಾನದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ"