ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಒಂದೆಡೆ ಉರಿಬಿಸಿಲು ದಿನೇ ದಿನೇ ಏರುತ್ತಿರುವಂತೆಯೇ ಕಾಡ್ಗಿಚ್ಚು ರಾಜ್ಯದ ಹಲವೆಡೆ ಕಾಣಿಸಿಕೊಳ್ಳುತ್ತಿದೆ. ತರಗಲೆಗಳು, ಒಣಹುಲ್ಲುಗಳ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡು ಸಸ್ಯಸಂಪತ್ತು ನಾಶವಾಗುವ ಪ್ರಕ್ರಿಯೆ ಈ ವರ್ಷವೂ ನಡೆಯುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಇಲ್ಲಿರುವ ಹಲವಾರು ವನ್ಯಮೃಗಗಳು ಸಾವಿಗೀಡಾಗಿರುವ ಶಂಕೆ ಇದೆ.
ಬೆಂಕಿ ರಾಷ್ಟ್ರೀಯ ಹೆದ್ದಾರಿಗೆ ವ್ಯಾಪಿಸಿದ ಪರಿಣಾಮ 2 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 67ನ್ನು ಬಂದ್ ಮಾಡಲಾಯಿತು. ಇದರಿಂದ ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ನೂರಾರು ವಾಹನಗಳನ್ನು ಮೇಲುಕಾಮನಹಳ್ಳಿ ಗೇಟ್ ಬಳಿ ಮೂರು ಗಂಟೆಗಳ ಕಾಲ ತಡೆ ಹಿಡಿಯಲಾಯಿತು. ಹಿಮವದ್ ಗೋಪಾಲಸ್ವಾಮಿ ದೇವಾಲಯದವರೆಗೂ ಬೆಂಕಿ ಕಾಣಿಸಿಕೊಂಡಿತ್ತು.
ಕೊಡಗಿನ ಸೋಮವಾರಪೇಟೆ ಸಮೀಪದ ಎಡವನಾಡು ಬಳಿಯ ಅರಣ್ಯಕ್ಕೂ ಬೆಂಕಿ ಬಿದ್ದಿದ್ದು, 2 ಗಂಟೆಗಳ ಕಾಲದ ಸತತ ಪರಿಶ್ರಮದ ಬಳಿಕ ಬೆಂಕಿ ನಂದಿಸಲಾಯಿತು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ ವಲಯದಂಚಿನ ಪ್ರಾದೇಶಿಕ ವಿಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ನಾಗರಹೊಳೆ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಮೈಸೂರು ಪ್ರಾದೇಶಿಕ ಅರಣ್ಯ ವ್ಯಾಪ್ತಿಗೆ ಸೇರಿರುವ ಗಡಿಭಾಗದ ಸೊಳ್ಳೆಪುರ ವಲಯದಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ವೀರನಹೊಸಹಳ್ಳಿ ವನ್ಯಜೀವಿ ವಲಯಕ್ಕೆ ಬೆಂಕಿ ವ್ಯಾಪಿಸಿತಾದರೂ ಅಲ್ಲಿದ್ದ ಸಿಬ್ಬಂದಿ ಬೆಂಕಿನಂದಿಸಿ, ಹರಡದಂತೆ ಕ್ರಮವಹಿಸಿದ್ದಾರೆ.
Be the first to comment on "ರಕ್ಷಿತಾರಣ್ಯಗಳಲ್ಲಿ ಕಾಡ್ಗಿಚ್ಚು, ರಾಜ್ಯದ ಹಲವೆಡೆ ಸುಡುಬಿಸಿಲಿನ ಜೊತೆಗೆ ಬೆಂಕಿ"