ಬಂಟ್ವಾಳ: ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ಹೆತ್ತವರ ಕರ್ತವ್ಯವಾಗಿದೆ. ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜ್ಯನ್ಯಗಳಿಗೆ ಪೋಷಕರ ಬೇಜವಾಬ್ದಾರಿತನವೇ ಕಾರಣವಾಗಿದೆ ಎಂದು ಬಂಟ್ವಾಳ ನ್ಯಾಯವಾದಿ ಜೇಸಿ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ಹೇಳಿದರು.
ಮಂಚಿ ಸರಕಾರಿ ಪ್ರೌಢ ಶಾಲೆಯಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ ಘಟಕದ ವತಿಯಿಂದ ಸರಕಾರಿ ಪ್ರೌಢ ಶಾಲೆ ಕುಕ್ಕಾಜೆ ಮಂಚಿಯಲ್ಲಿ ಏರ್ಪಡಿಸಲಾದ ಮಕ್ಕಳ ಹಕ್ಕು ಮತ್ತು ಹೆತ್ತವರ ಜವಾಬ್ದಾರಿಯ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಅಧ್ಯಯನ ತಂತ್ರ ಮತ್ತು ಪರೀಕ್ಷಾ ಸಿದ್ಧತೆಯ ಬಗ್ಗೆ ಜೆಸಿಐ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಪರೀಕ್ಷೆಗಾಗಿ ಸಿದ್ದತೆ ಮಾಡಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಪರೀಕ್ಷಾ ಭಯವಿರುವುದಿಲ್ಲ. ಜೀವನದ ಪ್ರಮುಖ ಹಂತವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ವಿದ್ಯಾರ್ಥಿಗಳು ಸಮಯವನ್ನು ಸಧ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜೆಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷ ಹರ್ಷರಾಜ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಜೆಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ವಿವಿಧ ಕೌಶಲಗಳನ್ನು ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ಶುಭ ಹಾರೈಸಿದರು . ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಐತಾಳ ಮಾತನಾಡಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆರ್ಥಿಕ ಸಹಾಯ ನೀಡಿ ಪುರಸ್ಕರಿಸಲಾಗುವುದು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.
ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸಹಶಿಕ್ಷಕರು,ವಿದ್ಯಾರ್ಥಿಗಳ ಹೆತ್ತವರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.
Be the first to comment on "ಮಕ್ಕಳಿಗೆ ಉತ್ತಮ ಶಿಕ್ಷಣ ಹೆತ್ತವರ ಕರ್ತವ್ಯ: ರವೀಂದ್ರ ಕುಕ್ಕಾಜೆ"