ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ನನ್ನ ಮನೆ, ಸಂಸ್ಥೆ, ಸಮಾಜದಲ್ಲಿ ಆರೋಗ್ಯಕರ, ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಸರ್ವರ ಮನ ಒಲಿಸಿ ಪ್ರೇರಣೆ ನೀಡುತ್ತೇನೆ. ನನಗೆ, ನನ್ನ ಕುಟುಂಬಕ್ಕೆ ಹಾಗೂ ನನ್ನ ದೇಶಕ್ಕೆ ಗೌರವ ತರುವ ತತ್ವಗಳನ್ನು ಆಧರಿಸುತ್ತೇನೆ. ಸುಳ್ಳು, ವಂಚನೆ, ಕಳ್ಳತನಗಳಲ್ಲಿ ಭಾಗಿಯಾಗುವ ಯಾವುದೇ ಆಮಿಷಗಳಿಂದ ದೂರವಿರುತ್ತೇನೆ. ಪ್ರಾಮಾಣಿಕ, ವೈಯಕ್ತಿಕ, ಐಕ್ಯತೆ, ಇತರರಿಗೆ ಗೌರವ ನೀಡುವ ಜವಾಬ್ದಾರಿಯನ್ನು ಜೀವನದ ಉದ್ದಕ್ಕೂ ಪಾಲಿಸುತ್ತೇನೆ ಎಂದು ವಚನ ನೀಡುತ್ತೇನೆ. ಈ ಪ್ರಮಾಣವಚನವನ್ನು ನಾನು ಸ್ವ ಇಚ್ಛೆಯಿಂದ ಸ್ವ ಪ್ರೇರಣೆಯಿಂದ ಪಡೆದುಕೊಳ್ಳುತ್ತಿದ್ದೇನೆ.
ಹೀಗೆಂದು ಫೆ.2ರಂದು ಜೇಸಿ ಆಚರಿಸುವ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯ ಸಂದರ್ಭ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ಪದವಿಯ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಶನಿವಾರ ಪ್ರತಿಜ್ಞೆ ಸ್ವೀಕರಿಸಿದರು.
ವಿಶ್ವವ್ಯಾಪಿಯಾಗಿರುವ ಯುವಕರ ಸ್ವಯಂಸೇವಾ ಸಂಘಟನೆಯಾಗಿರುವ ಜೇಸಿ ರಾಷ್ಟ್ರೀಯ ಭಾವೈಕ್ಯತಾ ದಿನವನ್ನಾಗಿ ಫೆ.2ರಂದು ಆಚರಿಸುತ್ತಿದ್ದು, ಈ ಸಂದರ್ಭ ದೇಶದಾದ್ಯಂತ ಕೋಟ್ಯಂತರ ಯುವಜನರು ವಿಶೇಷವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸುತ್ತಾರೆ. ದೇಶದ ಗೌರವವನ್ನು ಕಾಪಾಡುವ ಹಾಗೂ ನೈತಿಕವಾಗಿ ಉತ್ತಮ ತತ್ವಾಧಾರಿತ ಬದುಕು ಸಾಗಿಸುವ ವಿಚಾರಗಳನ್ನು ಈ ಸಂದರ್ಭ ಅಳವಡಿಸಿಕೊಳ್ಳಬೇಕು ಹಾಗೂ ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯಬೇಕು, ಎಂಬುದು ವ್ಯಕ್ತಿತ್ವ ವಿಕಸನವನ್ನು ಪ್ರಧಾನವಾಗಿಸಿಕೊಂಡ ಜೇಸಿಯ ಆಶಯದಂತೆ ಕಾರ್ಯಕ್ರಮ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಫೆ.2ರಂದು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಕಲ್ಲಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅವಕಾಶ ಮತ್ತು ಆಶಾವಾದಿಗಳಾಗಿರಬೇಕು. ಬಂದಂತಹ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ಮಾತ್ರ ನಾವು ಬೆಳೆಯುವುದಕ್ಕೆ ಸಾಧ್ಯವಿದೆ. ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮತ್ತು ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಜೆಸಿಐ ಪ್ರಯತ್ನಿಸುತ್ತಿದೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಹರೀಶ ಎ. ಉಪಸ್ಥಿತರಿದ್ದರು.
Be the first to comment on "ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞೆ"