ವಿದ್ಯಾರ್ಥಿಗಳ ಕೊರತೆ, ಪೋಷಕರ ಆಂಗ್ಲಮಾಧ್ಯಮ ಶಾಲೆಗಳ ಮೇಲಿನ ವ್ಯಾಮೋಹದಿಂದಾಗಿ ಮುಚ್ಚುವ ಭೀತಿಯಲ್ಲಿರುವ ರಾಜ್ಯದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು ಸಮಿತಿ ರಾಜಾಧ್ಯಕ್ಷರಾಗಿ ಉದ್ಯಮಿ ಪ್ರಕಾಶ್ ಅಂಚನ್ ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಚಾಲುಕ್ಯ ಹೋಟೇಲ್‌ನಲ್ಲಿ ನಡೆದ ಶಿಕ್ಷಣಾಭಿಮಾನಿಗಳ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ರಾಜ್ಯ ಉಚ್ಛನಾಯಾಲಯದ ನ್ಯಾಯವಾದಿ ರಾಜಶೇಖರ್ ಎಸ್., ಗೌರವಾಧ್ಯಕ್ಷರಾಗಿರುವ ಈ ರಾಜ್ಯ ಸಮಿತಿಯ ಇತರ ಪದಾಧಿಕಾರಿಗಳಾಗಿ ವಿಕ್ರಂ ಬೆಂಗಳೂರು, ಪುರುಷೋತ್ತಮ ಅಂಚನ್, ನ್ಯಾಯವಾದಿಗಳಾದ ಮಯೂರ್, ಶಿಲ್ಪಾ ಕೆ.ಎಸ್ ತಿಪಟೂರು, ಪತ್ರಕರ್ತ ಸಂದೀಪ್ ಸಾಲ್ಯಾನ್, ಉದ್ಯಮಿ ಅಶೋಕ್ ಎ. ಚಿಕ್ಕಬಳ್ಳಾಪುರ, ರಾಮಚಂದ್ರ ಕರೆಂಕಿ ಆಯ್ಕೆಯಾದರು.
ಪ್ರಕಾಶ್ ಅಂಚನ್ ಈ ಸಂದರ್ಭ ಮಾತನಾಡಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತವನ್ನು ತಲುಪುತ್ತಿರುವ ಈ ಕಾಲಘಟ್ಟದಲ್ಲಿ ಸುಮಾರು ೫೦ ಲಕ್ಷ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ, ಮುಚ್ಚುತ್ತಿರುವ ಶಾಲೆಗಳನ್ನು ಉಳಿಸಿ, ಬೆಳೆಸಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಬೇಕೆಂಬುದು ಸಮಿತಿಯ ಉದ್ದೇಶ. ಬಂಟ್ವಾಳ ತಾಲೂಕಿನಲ್ಲಿ ದಡ್ಡಲಕಾಡುವಿನ ದಕ್ಷಿಣ ಕನ್ನಡ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ ೩೦ ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ (೨೦೧೫-೧೬) ಪ್ರಸ್ತುತ ೫೦೦ ವಿದ್ಯಾರ್ಥಿಗಳು ಮೂಲ ಸೌಕರ್ಯದೊಂದಿಗೆ ಸುಸಜ್ಜಿತವಾದ ನೂತನ ಕಟ್ಟಡದಲ್ಲಿ ವಿದ್ಯಾರ್ಜನೆಯನ್ನು ಪಡೆಯುತ್ತಿದ್ದು ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ವಿದ್ಯಾರ್ಥಿಗಳಿಗೆ ಮಾತೃಭಾಷೆಯ ಶಿಕ್ಷಣದೊಂದಿಗೆ ಆಂಗ್ಲ ಭಾಷೆಯ ಶಿಕ್ಷಣವೂ ಸರಕಾರಿ ಶಾಲೆಗಳಲ್ಲಿ ದೊರೆತರೆ ಮಾತ್ರ ಮಕ್ಕಳ ಸಂಖ್ಯಾ ಬಲವನ್ನು ಹೆಚ್ಚಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬಹುದಾಗಿದೆ. ಎಲ್‌ಕೆಜಿ, ಯುಕೆಜಿ ಯೊಂದಿಗೆ ಸಂಸ್ಕಾರಯುತ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಬಹುದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಬಲಪಡಿಸುವ ರೂಪುರೇಷೆ ಸಿದ್ದಪಡಿಸುವುದಾಗಿ ಅವರು ಮಾಹಿತಿ ನೀಡಿದರು.
Be the first to comment on "ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಗೆ ಪ್ರಕಾಶ್ ಅಂಚನ್ ಅಧ್ಯಕ್ಷ"