ಕಾಂಗ್ರೆಸ್ ಪಕ್ಷದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರ ಬದಲಾವಣೆಯಾಗಿದ್ದು, ಪದಗ್ರಹಣ ಸಮಾರಂಭ ನವೆಂಬರ್ 26ರಂದು ಬಂಟ್ವಾಳ ಜೋಡುಮಾರ್ಗ ಉದ್ಯಾನವನ ಸಮೀಪದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ. ಈ ವಿಷಯವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ವಹಿಸಲಿದ್ದು, ಮಾಜಿ ಶಾಸಕ ಗೋಪಾಲ ಭಂಡಾರಿ ಮತ್ತು ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಭಾಷಣಕಾರರಾಗಿ ಭಾಗವಹಿಸುವರು. ರಮಾನಾಥ ರೈ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಪ್ರಮುಖರಾದ ವಿನಯ ಕುಮಾರ್ ಸೊರಕೆ, ಐವನ್ ಡಿಸೋಜ, ಯು.ಬಿ.ವೆಂಕಟೇಶ್, ಬಿ.ಎಚ್.ಖಾದರ್, ರಾಜಶೇಖರ ಕೋಟ್ಯಾನ್, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ಮಿಥುನ್ ರೈ, ಶಾಲೆಟ್ ಪಿಂಟೋ, ಶೇಖರ್ ಕುಕ್ಕೇಡಿ, ಅಬ್ದುಲ್ ರವೂಫ್ ಮತ್ತು ಟಿ.ಪ್ರವೀಣ್ ಚಂದ್ರ ಆಳ್ವ ಭಾಗವಹಿಸುವರು ಎಂದವರು ಮಾಹಿತಿ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬೇಬಿ ಕುಂದರ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುದೀಪ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕರಿಸುವರು. ಈ ಹಿಂದೆ ಬಂಟ್ವಾಳ ಬ್ಲಾಕ್ ಗೆ ಮಾಯಿಲಪ್ಪ ಸಾಲ್ಯಾನ್ ಮತ್ತು ಪಾಣೆಮಂಗಳೂರು ಬ್ಲಾಕ್ ಗೆ ಬಿ.ಎಂ.ಅಬ್ಬಾಸ್ ಆಲಿ ಕಾರ್ಯನಿರ್ವಹಿಸಿದ್ದು, ಉತ್ತಮ ಸಾಧನೆ ತೋರಿದ್ದಾರೆ. ಪಕ್ಷವನ್ನು ಮತ್ತಷ್ಟು ಸಂಘಟನಾತ್ಮಕವಾಗಿ ಬಲಪಡಿಸುವ ಉದ್ದೇಶದಿಂದ ಯುವ ಪಡೆಯನ್ನು ನಿಯುಕ್ತಿಗೊಳಿಸಲಾಗಿದ್ದು, ಎಲ್ಲ ಹಿರಿಯರೂ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ದೇಶಪಾಂಡೆ
ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಸಮಸ್ಯೆ ಬಗೆಹರಿದಿದ್ದು, 25ರಂದು ಮಧ್ಯಾಹ್ನ 12 ಗಂಟೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಲಿದ್ದಾರೆ. ಬಳಿಕ ತಾಲೂಕಿನ ಎಲ್ಲರಿಗೂ 94ಸಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ಶಿಷ್ಟಾಚಾರ ಪ್ರಕಾರ ನಡೆಯಲಿದ್ದು, ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಉಪಯೋಗಕ್ಕೆ ದೊರಕಲಿದೆ. 94ಸಿ ಹಕ್ಕುಪತ್ರ ವಿತರಣೆಯಲ್ಲಿ ಬಂಟ್ವಾಳ ಪ್ರಥಮ ಸ್ಥಾನ ರಾಜ್ಯದಲ್ಲೇ ಪಡೆದಿದ್ದು, ಇದು ತನ್ನ ಅವಧಿಯಲ್ಲಿ ಆದ ಸಾಧನೆ ಎಂದು ರೈ ಹೇಳಿದರು.
ಲೋಕಸಭೆಗೆ ಸ್ಪರ್ಧೆ:
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೈ, ಪಕ್ಷ ಏನು ಹೇಳುತ್ತದೆ ಅದನ್ನು ನಿಭಾಯಿಸುತ್ತೇನೆ. ಸ್ಪರ್ಧಿಸಲು ತಿಳಿಸಿದರೆ ಅದಕ್ಕೂ ಸಿದ್ಧ, ಬೇಡವೆಂದರೆ ಬೇಡ. ಕಾಂಗ್ರೆಸ್ ಪಕ್ಷವೇ ನನ್ನ ಧರ್ಮ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹೈಕಮಾಂಡ್ ಹೇಳಿದ ಕೆಲಸವನ್ನು ಮಾಡುತ್ತೇನೆ ಎಂದು ರೈ ಹೇಳಿದರು.
ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್, ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಸವಿತಾ ರಮೇಶ್, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ, ಸುದರ್ಶನ ಜೈನ್, ಪ್ರಶಾಂತ್ ಕುಲಾಲ್, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಮಧುಸೂಧನ ಶೆಣೈ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment on "26ರಂದು ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ, ಕಾರ್ಯಕರ್ತರ ಸಭೆ"