ಡಿಸೆಂಬರ್ ಒಂದನೇ ತಾರೀಕಿನಿಂದ ಎಲ್ಲ ರೀತಿಯ ಆಸ್ತಿಯ ವ್ಯವಹಾರಗಳಿಗೆ ನಗರ ಪ್ರದೇಶ ವ್ಯಾಪ್ತಿಯಲ್ಲಿ ಯುಪಿಒಆರ್ ಕಾರ್ಡ್ ಕಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರ ಆಸ್ತಿ ಮಾಲೀಕತ್ವ ಯೋಜನೆ ಪ್ರಮಾಣ ಪತ್ರಗಳು ನಗರ ಪ್ರದೇಶದ ಎಲ್ಲ ವ್ಯವಹಾರಗಳಿಗೆ ಕಡ್ಡಾಯವಾಗಿದ್ದು, ಕಂದಾಯ ಇಲಾಖೆ ಕಾರ್ಡ್ ನೀಡಿಕೆಗೆ ಸಂಬಂಧ ಸೂಕ್ತ ವ್ಯವಸ್ಥೆಗಳೊಂದಿಗೆ ಸನ್ನದ್ದವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಯುಪಿಒಆರ್ ಕಾರ್ಡ್‍ನಿಂದಾಗಿ ಅಕ್ರಮಗಳ ತಡೆ, ಪಾರದರ್ಶಕ ಮತ್ತು ಆನ್‍ಲೈನ್ ನಲ್ಲಿ ಆಸ್ತಿಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಲಿದೆ. ಸಮೀಕ್ಷೆಗೆ ಸಂಬಂಧಿಸಿದಂತೆ 12 ಹೊಸ ಸರ್ವೇಯರ್‍ಗಳನ್ನೊಳಗೊಂಡಂತೆ ಒಟ್ಟು 20 ಜನರಿದ್ದು, ಇನ್ನೂ ಐದು ಸರ್ವೇಯರ್‍ಗಾಗಿ ಬೇಡಿಕೆ ಮಂಡಿಸಲಾಗಿದೆ. ಈ ಸಂಬಂಧ ಯಾವುದೇ ಸವಾಲು ಹಾಗೂ ಸಮಸ್ಯೆಗಳನ್ನೆದುರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾನ್ಪಿಲ್ಕಿಟ್ ರೆಸುಲ್ಯೂಷನ್ ಸಮಿತಿಯನ್ನು ವಾರಕ್ಕೆ ಎರಡು ಸಾರಿ ಕರೆಯಲಾಗುವುದು. ಯುಪಿಆರ್‍ಕಾರ್ಡ್‍ಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದರು.
upormagaluru.com ಹೆಲ್ಪ್‍ಲೈನ್ ಸಹ ಲಭ್ಯವಿದ್ದು, ಮನೆಯಿಂದಲೇ ಮಾಹಿತಿ ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದರು. ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 32 ಕಂದಾಯ ಗ್ರಾಮಗಳನ್ನು 6 ವಲಯಗಳನ್ನಾಗಿ ಮತ್ತು 30 ಸೆಕ್ಟರ್‍ಗಳಾಗಿ ವಿಂಗಡಿಸಿ ಈ ವ್ಯಾಪ್ತಿಯೊಳಗಿನ ಸುಮಾರು 1,50,635 ಆಸ್ತಿಗಳ ಅಳತೆ ಕಾರ್ಯವನ್ನು ಪೂರ್ಣ ಗೊಳಿಸಲಾಗಿದೆ. 77306 ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. 31883 ಕರಡು ಪಿ ಆರ್ ಕಾರ್ಡ್‍ಗಳನ್ನು ತಯಾರಿಸಲಾಗಿದೆ. 26393 ಕರಡು ಪಿ ಆರ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. 23569 ಅಂತಿಮವಾಗಿ ಪಿ ಆರ್ ಕಾರ್ಡ್‍ಗಳನ್ನು ಅನುಮೋದಿಸಲಾಗಿದೆ. ಅಂತಿಮವಾಗಿ 18491 ಪಿ ಆರ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಕರಡು ಪಿ ಆರ್ ಕಾರ್ಡ್ ತಯಾರಿಸಿ ಆಸ್ತಿದಾರರಿಗೆ ಜಾರಿಯಾದ ದಿನಾಂಕದಿಂದ 30 ದಿನಗಳ ಅವಧಿಯ ಒಳಗೆ ಆಕ್ಷೇಪಣೆ ಸಲ್ಲಿಸಲು ನಿಯಮಾನುಸಾರ ಅವಕಾಶವಿದೆ ಎಂದರು. ಭೂದಾಖಲೆಗಳ ಉಪನಿರ್ದೇಶಕರಾದ ಕುಸುಮಾಧರ, ಅಪರ ಜಿಲ್ಲಾಧಿಕಾರಿ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.
Be the first to comment on "ಡಿ. 1 ರಿಂದ ಆಸ್ತಿ ವ್ಯವಹಾರಗಳಿಗೆ ನಗರ ಪ್ರದೇಶದಲ್ಲಿ ಯುಪಿಒಆರ್ ಕಾರ್ಡ್ ಕಡ್ಡಾಯ"