- ಮರಳು ಸಮಸ್ಯೆ ಪರಿಹಾರ ಒತ್ತಾಯಿಸಿ ನ.3ರಂದು ಮಿನಿ ವಿಧಾನಸೌಧದೆದುರು ಪ್ರತಿಭಟನೆ
ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂಬ ಕಾರಣದಿಂದಲೇ ಉದ್ದೇಶಪೂರ್ವಕವಾಗಿ ಮೈತ್ರಿ ಸರಕಾರವು ಎರಡೂ ಜಿಲ್ಲೆಗಳ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಲು ಹೊರಟಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾಡಿ ಘಾಟ್ ರಸ್ತೆ ಸರಿಯಾದರೂ ಸಂಚಾರಕ್ಕೆ ಸರಕಾರ ಶೀಘ್ರ ಅನುವುಮಾಡಿಕೊಡಲಿಲ್ಲ. ಬಳಿಕ ಒತ್ತಡ ಹೇರಿದ ನಂತರ ಬಿಡಲಾಯಿತು. ಇದೀಗ ಜನಸಾಮಾನ್ಯರಿಗೆ ಮರಳು ಕೈಗೆಟಕುವ ದರದಲ್ಲಿ ದೊರಕದಂತೆ ಮಾಡಲಾಗುತ್ತಿದೆ. ಕೃಷಿ ಬೆಳೆ ಹಾನಿ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ. ಶಿಕ್ಷಕರ ಸಂಬಳವೂ ಅವ್ಯವಸ್ಥಿತವಾಗಿದೆ. ಆಡಳಿತ ಯಂತ್ರವನ್ನೇ ಸ್ಥಗಿತಗೊಳ್ಳುವಂತೆ ರಾಜ್ಯ ಸರಕಾರ ಮಾಡುತ್ತಿದ್ದು, ವಿಶೇಷವಾಗಿ ಬಿಜೆಪಿ ಶಾಸಕರು ಇರುವ ಪ್ರದೇಶಗಳಲ್ಲಿ ಕೆಲಸ ಕಾರ್ಯಗಳು ನಡೆಯದಂತೆ ಮಾಡಲಾಗುತ್ತಿದೆ. ಉಡುಪಿಯಲ್ಲಿ ಶಾಸಕರು ಪ್ರತಿಭಟನೆ ನಡೆಸುತ್ತಿದ್ದರೂ ಸಿಎಂ ಕಂಡೂ ಕಾಣದಂತೆ ವರ್ತಿಸಿದರು. ಮರಳು ವಿಚಾರ ಕೇಂದ್ರದ್ದು ಎಂದು ಈಗ ಜಾರಿಕೊಳ್ಳುತ್ತಿದ್ದು, ವಾಸ್ತವವಾಗಿ ರಾಜ್ಯ ಸರಕಾರಕ್ಕೆ ಸೇರಿದ್ದು ಎಂದು ದೂರಿದರು. ಮರಳು ನೀತಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೇ ಇರಲು ಕಾಣದ ಕೈಗಳ ಕೈವಾಡ ಇದೆ ಎಂದು ಶಾಸಕ ಆಪಾದಿಸಿದರು.
ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ನ.3ರಂದು ಪ್ರತಿಭಟನೆ
ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮರಳು ಸಮಸ್ಯೆ, ಅಡಕೆ ಕೊಳೆರೋಗದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ತಕ್ಷಣ ಪರಿಹಾರ ಮತ್ತು ಭೂಪರಿವರ್ತನೆ ಕಾರ್ಯಗಳು ಸರಳಗೊಳಿಸುವಂತೆ ಒತ್ತಾಯಿಸಿ ಶನಿವಾರ ನ,3ರಂದು ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಶಾಸಕರ ನೇತ್ರತ್ವದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ತಾಲೂಕು ಮಟ್ಟದ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ಮರಳು ಸಮಸ್ಯೆಗೆ ಕಾರಣ ಕಾಂಗ್ರೆಸ್ ಸರಕಾರದ ನೀತಿ. ಇಲ್ಲಿ ಬೇನಾಮಿ ಹೆಸರಲ್ಲಿ ಮರಳು ಪರ್ಮಿಟ್ ದೊರಕುವಂತೆ ಮಾಡಲಾಗಿತ್ತು ಎಂದು ಆಪಾದಿಸಿದರು. ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ಸರಕಾರ ನಿಷ್ಕ್ರಿಯವಾಗಿದ್ದು, ಐಸಿಯುನಲ್ಲಿದೆ, ರೈತರ ಸಾಲ ಮನ್ನಾ ವಿಚಾರದಲ್ಲಿ ಅವರನ್ನು ಸತಾಯಿಸಲಾಗುತ್ತಿದೆ ಎಂದರು. ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಮಾತನಾಡಿ, ಪ.ಜಾತಿ, ಪಂಗಡ ದವರು ಈ ಸರಕಾರದ ನೀತಿಯಿಂದಾಗಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಜಿ.ಆನಂದ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ ಮತ್ತಿತರರಿದ್ದರು.
Be the first to comment on "ರಾಜ್ಯ ಸರಕಾರದಿಂದ ಕರಾವಳಿ ಆರ್ಥಿಕತೆ ನಾಶ ಹುನ್ನಾರ: ಶಾಸಕ ರಾಜೇಶ್ ನಾಯ್ಕ್ ಆರೋಪ"