ಅಡಿಕೆ ಬೆಳೆಗಾರರ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಅಡಿಕೆ ಮರ ಏರುವ ಕುಶಲಕರ್ಮಿಗಳ ತಯಾರು ಮಾಡುವ ನಿಟ್ಟಿನಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರ್ಪಡಿಸಲು ಕ್ಯಾಂಪ್ಕೋ ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಸಭೆಯು ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಕಾರ್ಖಾನೆಯ ಸಭಾಂಗಣದಲ್ಲಿ ಸೋಮವಾರ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅಡಿಕೆ ಬೆಳೆಗಾರರಿಗೆ ವಿಪರೀತ ಮಳೆ ಕೊಳೆರೋಗಕ್ಕೆ ಪ್ರಮುಖ ಕಾರಣವಾಗಿದ್ದರೆ ಔಷಧಿ ಸಿಂಪಡಣೆಗೆ ನುರಿತ ಕುಶಲಕರ್ಮಿಗಳ ಲಭ್ಯತೆಯ ಕೊರತೆಯೂ ಇನ್ನೊಂದು ಕಾರಣವಾಗಿದೆ. ಹೀಗಾಗಿ ಈ ಕುಶಲಕರ್ಮಿಗಳನ್ನು ತಯಾರು ಮಾಡುವ ಅದರಲ್ಲೂ ಯುವಕರನ್ನು ಕೇಂದ್ರವಾಗಿರಿಸಿ ತರಬೇತಿ ಶಿಬಿರ ಏರ್ಪಡಿಸುವ ಯೋಚನೆ ನಡೆದಿದೆ. ಕಳೆದ ಕೆಲವು ಸಮಯದ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಇಂತಹದ್ದೇ ಶಿಬಿರ ಯಶಸ್ವಿಯಾಗಿ ನಡೆದಿತ್ತು. ಸುಮಾರು 35 ಯುವಕರು ತರಬೇತಿ ಪಡೆದಿದ್ದರು. ಇದರ ಆಧಾರದಲ್ಲಿ ಕ್ಯಾಂಪ್ಕೋ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹದ್ದೇ ಶಿಬಿರವನ್ನು ನಡೆಸುವ ಮೂಲಕ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸುವ ಕುಶಲಕರ್ಮಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಈಗ ಯೋಚಿಸಿದೆ.
ಅಡಿಕೆ ಮರ ಏರುವ ತರಬೇತಿ ಶಿಬಿರವನ್ನು ಮುಂದಿನ ತಿಂಗಳು ನಡೆಸಲು ಉದ್ದೇಶಿಸಲಾಗಿದ್ದು, ಸ್ಥಳ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮೊದಲ ಸಭೆಯಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು ತೀರ್ಥಹಳ್ಳಿಯ ಎಲೈಟ್ ಗ್ರೂಪಿನ ತಂಡದ ಸದಸ್ಯರು ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಅಡಿಕೆ ಬೆಳೆಗಾರರು ಹೆಚ್ಚಿನ ಮಾಹಿತಿಗೆ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ 09946406321 ಅಥವಾ ಕ್ಯಾಂಪ್ಕೋ ಸಂಶೋಧನಾ ವಿಭಾಗದ ಮುಖ್ಯಸ್ಥ ಕೇಶವ ಭಟ್ ಅವರನ್ನು 08277085489 ಸಂಪರ್ಕಿಸಬಹುದಾಗಿದೆ.
ಈ ಸಂದರ್ಭ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ , ಅಡಿಕೆ ಪತ್ರಿಕೆ ಸಂಪಾದಕ ,ಪತ್ರಕರ್ತ ಶ್ರೀಪಡ್ರೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್, ಕೃಷಿಕ ಗಜಾನನ ವಝೆ, ಕೃಷಿಕ ವಿದ್ಯಾಧರ ಮರಾಠೆ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ, ಜಿಲ್ಲಾ ತೋಟಗಾರಿಕಾ ಸಹಾಯಕ ನಿರ್ದೇಶಕ ಎಚ್.ಆರ್.ನಾಯಕ್, ಕ್ಯಾಂಪ್ಕೋ ಇಂಜಿನಿಯರ್ ಶ್ಯಾಂಪ್ರಸಾದ್, ಕೃಷಿಕ ಜಯಪ್ರಕಾಶ್ನಾರಾಯಣ ತೊಟ್ಟೆತ್ತೋಡಿ, ತೀರ್ಥಹಳ್ಳಿಯ ಎಲೈಟ್ ಗ್ರೂಪಿನ ಪ್ರಮುಖರಾದ ಕೆ.ಆರ್.ಸತ್ಯನಾರಾಯಣ ಹಾಗೂ ಮನೋಹರ ರಾವ್, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಚ್.ನಾರಾಯಣಸ್ವಾಮಿ, ಕ್ಯಾಂಪ್ಕೋ ಸಂಶೋಧನಾ ವಿಭಾಗದ ಮುಖ್ಯಸ್ಥ ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಕ್ಯಾಂಪ್ಕೋ ನೇತೃತ್ವದಲ್ಲಿ ಪ್ರಯತ್ನ: ಅಡಿಕೆ ಮರ ಏರುವ ತರಬೇತಿ ಶಿಬಿರಕ್ಕೆ ಸಿದ್ಧತೆ"