ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನವರಾತ್ರಿ ಸಂಭ್ರಮ. ಎಲ್ಲೆಡೆಯೂ ಹುಲಿವೇಷಗಳದ್ದೇ ಅಬ್ಬರ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆರಾಧನೆ. ಎಲ್ಲೆಡೆ ಭಕ್ತರ ದಂಡು. ದ.ಕ.ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನಲ್ಲೀಗ ಹಬ್ಬದ ಕಳೆ.
ಮಂಗಳೂರು ದಸರಾ ಎಂದೇ ಖ್ಯಾತವಾಗಿರುವ ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಭಕ್ತರ ಪ್ರವಾಹ ಹರಿದುಬರುತ್ತಿದ್ದರೆ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಕೊಡಿಯಾಲ್ಬೈಲ್ ಭಗವತಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನ, ಬೋಳಾರ ಮಾರಿಯಮ್ಮ ದೇವಸ್ಥಾನ, ಕುರುಅಂಬಾ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಇತರ ದೇವಾಲಯಗಳಿಗೆ ಭಕ್ತರು ಭೇಟಿ ನೀಡುತ್ತಿದ್ದಾರೆ.
ದಸರಾ ಅಂಗವಾಗಿ ಕಟ್ಟಡಗಳನ್ನು ದೀಪಾಲಂಕಾರದಿಂದ ಶೃಂಗಾರಗೊಳಿಸಲಾಗಿದೆ. ರಸ್ತೆಗಳ ಡಿವೈಡರ್ಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಎಲ್ಲೆಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಇಂದು ಸಿಎಂ ಉದ್ಘಾಟನೆ:
ದಸರಾ ಮಹೋತ್ಸವವನ್ನು ಅ.14ರಂದು ಸಂಜೆ 6ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸುವರು. ದಸರಾ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ನಡೆಯಲಿದೆ. ಅ.೧೭ರಂದು ಚಂಡಿಕಾ ಹೋಮ, ಅ.18ರಂದು ಮಹಾ ಅನ್ನಸಂತರ್ಪಣೆ, ನಡೆಯಲಿದೆ. ಅ19ರಂದು ವೈಭವದ ಶೋಭಾ ಯಾತ್ರೆ ನಡೆಯಲಿದೆ.
ಮೆರವಣಿಗೆ ಅವಧಿ 12 ಗಂಟೆ:
ಮಂಗಳೂರು ದಸರಾ ವೈಭವವನ್ನು ಮತ್ತಷ್ಟು ವೈಭವಯುತವಾಗಿ ನಡೆಸುವುದರೊಂದಿಗೆ ಎಲ್ಲರಿಗೂ ಮೆರವಣಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಪೊಲೀಸರ ಸಹಕಾರದೊಂದಿಗೆ ದಸರಾ ಮೆರವಣಿಗೆಯನ್ನು 16 ಗಂಟೆಯಿಂದ 12 ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಹೇಳಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಸೋಮವಾರ ನಡೆದ ಆಡಳಿತ ಮಂಡಳಿ, ಪೊಲೀಸ್ ಅಧಿಕಾರಿಗಳು ಮತ್ತು ವೇಷಭೂಷಣ, ಸ್ತಬ್ದಚಿತ್ರ ತಂಡಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದ್ದಾರೆ.
ದಸರಾ ಮೆರವಣಿಗೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಈ ಬಾರಿಯೂ ಮುತುವರ್ಜಿ ವಹಿಸಿದ್ದು, 50ಕ್ಕೂ ಅಧಿಕ ಸ್ತಬ್ದಚಿತ್ರ, 100 ಕ್ಕೂ ಅಧಿಕ ವೇಷಭೂಷಣ, ವಾದ್ಯಮೇಳ ತಂಡಗಳು ಪಾಲ್ಗೊಳ್ಳಲಿವೆ ಎಂದರು.
ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್.ಮಾತನಾಡಿ, ಸಂಜೆ 4 ಗಂಟೆಗೆ ಮೆರವಣಿಗೆ ಆರಂಭವಾಗಲಿದ್ದು, ಭಕ್ತರು ಮೆರವಣಿಗೆ ಸಾಗುವ ಹಾದಿಯಲ್ಲಿ ಸಾಲುಗಟ್ಟಿ ನಿಂತು ಕಾಯುತ್ತಾರೆ. ತಡರಾತ್ರಿಯವರೆಗೆ ಅವರನ್ನು ಕಾಯಲು ಅವಕಾಶ ನೀಡದಂತೆ ವೇಗವಾಗಿ ಮೆರವಣಿಗೆ ಸಾಗಲು ಎಲ್ಲರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ಆ.20ರ ಬೆಳಗ್ಗೆ 4 ಗಂಟೆಯೊಳಗೆ ಮೆರವಣಿಗೆಯನ್ನು ಸಮಾಪನಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಮಂಗಳೂರು ನಗರ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ಭಾಸ್ಕರ್ ಒಕ್ಕಲಿಗ, ದೇವಳದ ಕಾರ್ಯದರ್ಶಿ ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಬಿ.ಕೆ. ತಾರನಾಥ್, ರವಿಶಂಕರ್ ಮಿಜಾರ್, ದೇವಳ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಡಾ. ಬಿ.ಜಿ. ಸುವರ್ಣ, ಶೇಖರ್ ಪೂಜಾರಿ, ಚಿತ್ತರಂಜನ್ ಗರೋಡಿ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್, ಡಾ. ಅನಸೂಯ ಬಿ.ಟಿ. ಸಾಲ್ಯಾನ್, ಹರಿಶ್ಚಂದ್ರ, ಲೀಲಾಕ್ಷ ಕರ್ಕೇರಾ ಉಪಸ್ಥಿತರಿದ್ದರು.
ಮೆರವಣಿಗೆಯ ತಂಡಕ್ಕೆ ಸೂಚನೆ
- ಮೆರವಣಿಗೆ ಟ್ಯಾಬ್ಲೋ, ಜನರೇಟರ್ ಗಾಡಿ ಹೊರತುಪಡಿಸಿ ಮೆರವಣಿಗೆ ಖಾಲಿ ವಾಹನ, ತೆರೆದ ಜೀಪ್ಗಳಿಗೆ ಅವಕಾಶವಿಲ್ಲ.
- ಅಶ್ಲೀಲ ಗೀತೆ, ಬೇರೆ ಧರ್ಮಕ್ಕೆ, ಸಮುದಾಯಕ್ಕೆ ಅಪಚಾರವಾಗುವಂತಹ ವೇಷಭೂಷಣ ಧರಿಸಿದರೆ ಶಿಸ್ತುಕ್ರಮ.
- ಸುಡ್ಡುಮದ್ದು ಪ್ರದರ್ಶನ ನಿಷೇಧ, ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ರಸ್ತೆಯಲ್ಲಿ ಬಿಸಾಡುವಂತಿಲ್ಲ.
- ಸ್ತಬ್ಧಚಿತ್ರ ಸಂಘಟಿಸುವ ಕನಿಷ್ಠ ೧೦ಮಂದಿ ಹೆಸರು, ವಿವರಗಳನ್ನು ಆಧಾರ್ಕಾರ್ಡ್ ದಾಖಲೆಯೊಂದಿಗೆ ದೇವಸ್ಥಾನಕ್ಕೆ ಒಪ್ಪಿಸಬೇಕು.
- ಟ್ಯಾಬ್ಲೋಗಳು 4 ಗಂಟೆಗೆ ಹಾಜರಿದ್ದು, ಮೆರವಣಿಗೆ ಸಾಲಿಗೆ ಜೋಡಿಸಿಕೊಳ್ಳಬೇಕು.
- ಮೆರವಣಿಗೆಗೆ ಬರುವ ಭಕ್ತಾದಿಗಳು ನಿಗದಿಪಡಿಸಿದ ಪಾರ್ಕಿಂಗ್ ಜಾಗದಲ್ಲೇ ವಾಹನ ನಿಲ್ಲಿಸಬೇಕು.
- ಮೆರವಣಿಗೆಯ ಜನಸಂದಣಿ ವೇಳೆ ವೇಳೆ ಸರಗಳ್ಳರು, ಕಿಸೆಗಳ್ಳರ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಮಾಹಿತಿ ಸಿಕ್ಕಾಗ ಪೊಲೀಸರಿಗೆ ಮಾಹಿತಿ ನೀಡಿ.
ನವಸಿರಿ ಕಲಾ ಸಂಭ್ರಮ:
ಕುದ್ರೋಳಿಯಲ್ಲಿ ನಡೆಯುವ ಮಂಗಳೂರು ದಸರಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಹೀಗಿದೆ.
14ರಂದು ಸಂಜೆ ಸಪ್ತಸ್ವರ ಆರ್ಕೆಸ್ಟ್ರಾ ತಂಡದಿಂದ ಭಕ್ತಿ ಗಾನ ರಸಮಂಜರಿ, ಸಂಜೆ 7ರಿಂದ ರಕ್ಷಾ ಎಸ್.ಎಚ್. ತಂಡದಿಂದ ನೃತ್ಯ ವೈಭವ, ಸಂಜೆ ೮ರಿಂದ ಡಾ.ಕೆ. ಶಶಿಕುಮಾರ್ ವಾರಣಾಸಿ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.15ರಂದು ಕುಮಾರಿ ಜಾನ್ಕಿ ಡಿ.ವಿ. ಅವರಿಂದ ಭರತನಾಟ್ಯ, 6.30ರಿಂದ ರವಿಚಂದ್ರ ಕನ್ನಡಿಕಟ್ಟೆ ಮತ್ತು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ನೃತ್ಯ ವೈಭವ, ಅ.16ರಂದು ಸ್ವಾತಿ ರಾವ್ ಮತ್ತು ಬಳಗದಿಂಧ ರಸಮಂಜರಿ, ಸಂಜೆ 7 ರಿಂದ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ಸಂಗಡಿಗರಿಂದ ಜನಪದ ಗೀತ ಝೇಂಕಾರ, ಅ.17ರಂದು ಸಂಜೆ 6ರಿಂದ ಸರ್ವಾಣಿ ಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರು ತಂಡದಿಂದ ನೃತ್ಯ ವೈವಿಧ್ಯ ನರ್ತನ ಚತುರ್ದರ್ಶನ ದಕ್ಷಯಜ್ಞ, ಅ.18ರಂದು ವಾಮಂಜೂರು ಅಮೃತೇಶ್ವರ ನಾಟ್ಯಾಲಯದಿಂದ ಭರತ ನಾಟ್ಯ, ಜಾನಪದ ನೃತ್ಯ, 7ರಿಂದ ರಮೇಶ್ಚಂದ್ರ ಬೆಂಗಳೂರು ತಂಡದಿಂದ ಭಕ್ತಿ–ಭಾವ–ರಸಸಂಜೆ ಮತ್ತು ಶಬರಿ ಗಾಣಿಗರಿಂದ ಗಾನ ಕುಂಚ ನೃತ್ಯ ನಡೆಯಲಿದೆ.
ಆರೋಗ್ಯ ಕಾರ್ಡ್:
ಮಂಗಳೂರು ದಸರಾ ಅಂಗವಾಗಿ ಈ ವರ್ಷದ ವಿನೂತನ ಕಾರ್ಯಕ್ರಮವಾಗಿ 10 ಸಾವಿರ ಮಂದಿಗೆ ಗೋಕರ್ಣನಾಥ ಆರೋಗ್ಯ ಕಾರ್ಡ್ ನೀಡಲು ನಿರ್ಧರಿಸಲಾಗಿದ್ದು, ಇದಕ್ಕೆ ಈಗಾಗಲೇ ಎರಡು ಆಸ್ಪತ್ರೆಗಳ ಜತೆ ಒಪ್ಪಂದ ಮಾತುಕತೆ ನಡೆದಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
2017ರ ದಸರಾ ಸಂದರ್ಭ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಮಹದಾಸೆಯಂತೆ ಕ್ಷೇತ್ರದ ವತಿಯಿಂದ ವಿದ್ಯಾನಿಧಿ, ಆರೋಗ್ಯ ನಿಧಿ, ಸಾಮಾಜಿಕ ನಿಧಿ ಸ್ಥಾಪಿಸಿ, 25ಲಕ್ಷ ರೂ. ವಿತರಣೆ ಮಾಡಲಾಗಿದೆ. ಇದನ್ನು ಈ ಬಾರಿಯೂ ಮುಂದುವರಿಸುವ ಜತೆ ಆರೋಗ್ಯ ಕಾರ್ಡ್ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಆರೋಗ್ಯ ಕಾರ್ಡ್ ಸಂಬಂಧಿಸಿದಂತೆ ನಗರದ ಎ.ಜೆ. ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಯುನಿಟಿ ಆಸ್ಪತ್ರೆ ಜತೆ ಈಗಾಗಲೇ ಒಪ್ಪಂದ ಮಾತುಕತೆ ನಡೆದಿದೆ. ಈ ಆರೋಗ್ಯ ಕಾರ್ಡ್ ಹೊಂದಿದ ಕುಟುಂಬದ ಚಿಕಿತ್ಸೆ ಹಾಗೂ ಇತರ ವೆಚ್ಚದಲ್ಲಿ ಶೇ.೨೫ರಷ್ಟು ರಿಯಾಯಿತಿ ಸಿಗಲಿದೆ. ಆ.18ರಂದು ಕಾರ್ಡ್ಗೆ ಚಾಲನೆ ಸಿಗಲಿದ್ದು, ಪ್ರಾರಂಭಿಕ ಹಂತದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ 1 ಸಾವಿರ ಮಂದಿಗೆ ಈ ಕಾರ್ಡ್ ವಿತರಣೆಯಾಗಲಿದೆ ಎಂದರು.
ದೇವಳದ ಕಾರ್ಯದರ್ಶಿ ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಬಿ.ಕೆ. ತಾರನಾಥ್, ರವಿಶಂಕರ್ ಮಿಜಾರ್, ದೇವಳ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಡಾ. ಬಿ.ಜಿ. ಸುವರ್ಣ, ಶೇಖರ್ ಪೂಜಾರಿ, ಚಿತ್ತರಂಜನ್ ಗರೋಡಿ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್, ಡಾ. ಅನಸೂಯ ಬಿ.ಟಿ. ಸಾಲ್ಯಾನ್, ಹರಿಶ್ಚಂದ್ರ, ಲೀಲಾಕ್ಷ ಕರ್ಕೇರ ಉಪಸ್ಥಿತರಿದ್ದರು.
Be the first to comment on "ದಕ್ಷಿಣ ಕನ್ನಡದಲ್ಲಿ ನವರಾತ್ರಿ ಸಂಭ್ರಮ: ಭಕ್ತರ ಸೆಳೆಯುತ್ತಿದೆ ಮಂಗಳೂರು ದಸರಾ"