ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.೨೨ರಂದು ಶತಮಾನೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಚಾರ ಆಂದೋಲನಕ್ಕೆ ಶನಿವಾರ ಚಾಲನೆ ದೊರೆಯಿತು.
ಶಾಲಾ ವ್ಯಾಪ್ತಿಯ ಪ್ರತೀ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಶತಮಾನೋತ್ಸವದ ಬಗ್ಗೆ ಮಾಹಿತಿ ನೀಡುವುದು, ಶತಮಾನೋತ್ಸವಕ್ಕೆ ಪೂರ್ವಭಾವಿಯಾಗಿ ಭೋಜನ ಶಾಲೆ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದು, ಶತಮಾನೋತ್ಸವಕ್ಕೆ ಮುನ್ನ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು, ಶಾಲೆಯಲ್ಲಿ ಕಲಿತಿರುವ ಹಿರಿಯ ವಿದ್ಯಾರ್ಥಿಗಳ ದಾಖಲೀಕರಣ ನಡೆಸಿ ಅವರಿಗೆ ಶತಮಾನೋತ್ಸವದ ಮಾಹಿತಿ ನೀಡುವ ಬಗ್ಗೆ ಚರ್ಚಿಸಲಾಯಿತು.
ಶತಮಾನೋತ್ಸವದಂದು ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಪ್ರದರ್ಶನ, ಗುರುವಂದನೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಅ.೨೧ರಂದು ಸಮಾಲೋಚನಾ ಸಭೆ ಮತ್ತು ಗ್ರಾಮ ಪ್ರಚಾರ ಕಾರ್ಯ ನಡೆಸಲು ನಿರ್ಧರಿಸಲಾಯಿತು. ಗ್ರಾಮ ಪಂಚಾಯತು ಸದಸ್ಯ ಕಾಪು ಜಯರಾಮ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಂಝ ಬಸ್ತಿಕೋಡಿ, ಸಂಚಾಲಕ ನಾರಾಯಣ ಶೆಟ್ಟಿ ಪರಾರಿ, ಸಲಹೆಗಾರ ಗೋಪಾಲ ಅಂಚನ್, ಪ್ರಧಾನ ಕಾರ್ಯದರ್ಶಿ ಡೇನಿಸ್ ಫೆರ್ನಾಂಡೀಸ್, ಸಮಿತಿ ಪ್ರಮುಖರಾದ ವಿಜಯ ರೈ, ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ,ಮೋಹನದಾಸ ಗಟ್ಟಿ, ಪ್ರಕಾಶ್ ಗಟ್ಟಿ, ಜನಾರ್ದನ ಶೆಟ್ಟಿ, ಪ್ರಮೀಳ, ಶ್ಯಾಮಪ್ರಸಾದ ಪೂಂಜ, ಕಮಲ್ ಶೆಟ್ಟಿ ಬೊಳ್ಳಾಜೆ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಜಾನೆಟ್ ಸ್ವಾಗತಿಸಿದರು. ಶೌಕತ್ ಆಲಿ ವಂದಿಸಿದರು.
Be the first to comment on "ಡಿ.22ರಂದು ಚೆನ್ನೈತ್ತೋಡಿ ಶಾಲಾ ಶತಮಾನೋತ್ಸವ: ಪ್ರಚಾರ ಆಂದೋಲನಕ್ಕೆ ಚಾಲನೆ"