ತಾಳೆಗರಿಗಳನ್ನ ರಕ್ಷಿಸಿ ಅಧ್ಯಯನ ಮಾಡಿ ಅಪೂರ್ವವಾದವುಗಳನ್ನು ಸಮಾಜಕ್ಕೆ ನೀಡಬೇಕಾಗಿದೆ. ಅವನ್ನು ಯುವಜನತೆ ಕೈಗೆತ್ತಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಂಶುಪಾಲ, ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿರುವ “ಶ್ರೀಭಾರತೀ ಪತ್ರಧಾಮ”ದ ಕಾರ್ಯದರ್ಶಿ ಡಾ.ಪಾದೆಕಲ್ಲು ವಿಷ್ಣು ಭಟ್ ಕರೆ ನೀಡಿದರು.
ಪುಂಜಾಲಕಟ್ಟೆ ಸ.ಪ್ರ.ದ.ಕಾಲೇಜಿನ ಅಂತಿಮ ಬಿ.ಎ.ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಭಾರತೀ ಪತ್ರಧಾಮದಲ್ಲಿ ನಡೆದ ತಾಳೆಗರಿ- ಕಡತ ಅಧ್ಯಯನದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ತಾಳೆಗರಿ-ತಾಡೋಲೆಗಳು ನಮ್ಮ ಹಿರಿಯರ ಜ್ಞಾನ ಕೋಶಗಳು. ತಮ್ಮ ಅನುಭವಗಳಿಗೆ ಬಂದುದೆಲ್ಲವನ್ನು ಅಕ್ಷರ, ಸಂಕೇತ ರೂಪಗಳಿಗೆ ಇಳಿಸಬಹುದಾದವುಗಳನ್ನು ಬಹಳ ಕಷ್ಟಪಟ್ಟು ಜತನದಿಂದ ತಾಳೆಗರಿಗಳಲ್ಲಿ ಬರೆದು ಸಂರಕ್ಷಣೆ ಮಾಡಿ ನಮಗಿತ್ತಿದ್ದಾರೆ ಎಂದು ಅವರು ಹೇಳಿದರು.
ಪತ್ರಧಾಮದ ಸಹಕಾರ್ಯದರ್ಶಿ ಉಂಡೆಮನೆ ವಿಶ್ವೇಶ್ವರ ಭಟ್ ಅವರು ಮಾತನಾಡಿ, ಶ್ರೀಮಠವು ಮಾಡುತ್ತಾ ಬಂದಿರುವ ಶೈಕ್ಷಣಿಕ ಸೇವೆಗಳನ್ನು ತಿಳಿಸಿ, ತುಳು/ತಿಗಳಾರಿ, ನಂದಿನಾಗರಿ, ಗ್ರಂಥಲಿಪಿ ಮುಂತಾದ ಲಿಪಿಗಳು ಅಧ್ಯಯನದ ಔಚಿತ್ಯ ಅನಿವಾರ್ಯತೆಗಳನ್ನು ವಿವರಿಸಿದರು.
ಪ್ರಾಂಶುಪಾಲ ಪ್ರೊ.ಗಣಪತಿ ಕುಳಮರ್ವ ಅವರ ಮಾರ್ಗದರ್ಶನದಲ್ಲಿ ನಡೆದ ಈ ವಿಶೇಷ ಕಲಿಕಾ ಕಾರ್ಯಕ್ರಮವನ್ನು ಉಪನ್ಯಾಸಕ ಡಾ.ಕೃಷ್ಣಾನಂದ ಅವರು ಸಂಯೋಜಿಸಿ, ಸ್ವಾಗತಿಸಿ ವಂದಿಸಿದರು.
Be the first to comment on "ಮಾಣಿ ಶ್ರೀಭಾರತೀ ಪತ್ರಧಾಮದಲ್ಲಿ ತಾಳೆಗರಿ- ಕಡತ ಅಧ್ಯಯನದ ಪ್ರಾತ್ಯಕ್ಷಿಕೆ"