ತಾಲೂಕು ಕೇಂದ್ರವಾದ ಬಂಟ್ವಾಳದಲ್ಲಿ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕಾದ ಅಗತ್ಯವಿದ್ದು, ಪೊಳಲಿ ದ್ವಾರದಿಂದ ನಾರಾಯಣಗುರು ವೃತ್ತದವರೆಗೆ ಇಡೀ ಬಿ.ಸಿ.ರೋಡ್ ಅನ್ನು ಸುಂದರಗೊಳಿಸುವ ಕಾರ್ಯ ನಡೆಯಲಿದೆ. ಅದೇ ರೀತಿ ಬಂಟ್ವಾಳ ಪರಿಸರದಲ್ಲಿ ಸ್ವಚ್ಛತೆಯಷ್ಟೇ ಅಲ್ಲ, ಶಾಂತಿ ಸಹಬಾಳ್ವೆಗೆ ನಾವು ಪ್ರಥಮ ಆದ್ಯತೆ ನೀಡಬೇಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ಪುರಸಭೆ, ರೋಟರಿ ಕ್ಲಬ್ ಬಂಟ್ವಾಳ, ಲಯನ್ಸ್ ಕ್ಲಬ್ ಬಂಟ್ವಾಳ, ಜೇಸಿ ಬಂಟ್ವಾಳ, ಜೋಡುಮಾರ್ಗ ನೇತ್ರಾವತಿ ಜೇಸಿ, ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್, ಎಸ್.ವಿ.ಎಸ್.ಕಾಲೇಜು ಬಂಟ್ವಾಳ, ಮೊಡಂಕಾಪು ಕಾರ್ಮೆಲ್ ಶಿಕ್ಷಣ ಸಂಸ್ಥೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಿತ ನಾನಾ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತೆಯ ಅರಿವು, ಪ್ಲಾಸ್ಟಿಕ್ ಮುಕ್ತ ಬಂಟ್ವಾಳದ ಕುರಿತು ಜಾಗೃತಿ ಮೂಡಿಸುವ ಜಾಥಾದ ಬಳಿಕ ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರ ೧೫೦ನೇ ಜನ್ಮದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೊದಲ್ಗೊಂಡು ಇಡೀ ದೇಶವೇ ಆಚರಿಸುತ್ತಿದೆ. ಈ ಸಂದರ್ಭ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ನಮ್ಮ ಮನೆ, ನಮ್ಮ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಾದ ನಾವೂ ಸ್ವಚ್ಛತೆಯ ಕುರಿತು ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದ ಶಾಸಕರು, ಕಳೆದ ಕೆಲ ವರ್ಷಗಳಲ್ಲಿ ಬಂಟ್ವಾಳ ಕಸದ ಕೊಂಪೆಯಾಗಿ ಮಾರ್ಪಟ್ಟಿರುವುದು ನೋವು ತಂದಿದ್ದು, ಹೀಗಾಗಿ ಬಂಟ್ವಾಳವನ್ನು ತ್ಯಾಜ್ಯಮುಕ್ತವಾಗಿಸಲು ಅಧಿಕಾರಿಗಳು ಕ್ರಿಯಾಶೀಲರಾಗಬೇಕು ಎಂದು ಸೂಚಿಸಿದರು.
ಬಂಟ್ವಾಳ ಪುರಸಭೆಯ ಸ್ವಚ್ಛತಾ ರಾಯಭಾರಿಯಾಗಿರುವ ಪ್ರೊ. ತುಕಾರಾಮ ಪೂಜಾರಿ ಮಾತನಾಡಿ, ಗಾಂಧೀಜಿಯವರ ಆದರ್ಶಗಳ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಛಲವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬಂಟ್ವಾಳ ಪ್ರ.ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಅಧಿಕರಿ ಪ್ರೊ. ಹೈದರಾಲಿ, ಎಸ್.ವಿ.ಎಸ್.ಕಾಲೇಜು ಪ್ರಾಚಾರ್ಯ ಪ್ರೊ.ಪಾಂಡುರಂಗ ನಾಯಕ್, ಕಾರ್ಮೆಲ್ ಕಾನ್ವೆಂಟ್ ವಿದ್ಯಾಸಂಸ್ಥೆಯ ಸಿ. ಸುಪ್ರಿಯಾ, ಎನ್ನೆಸ್ಸೆಸ್ ಆಫೀಸರ್ ಮಧುರಾ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ, ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಸುಧಾಕರ ಆಚಾರ್ಯ, ಜೋಡುಮಾರ್ಗ ಜೇಸಿ ಅಧ್ಯಕ್ಷೆ ಸವಿತಾ ನಿರ್ಮಲ್, ವರ್ತಕರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಕಿಟ್ಟು ರಾಮಕುಂಜ, ಎಸ್.ಕೆ.ಎಸ್.ಎಸ್.ಎಫ್. ನ ಪ್ರಮುಖರಾದ ಮಹಮ್ಮದ್ ರಫೀಕ್, ಅಂಗನವಾಡಿಯ ಪ್ರಮುಖರಾದ ವಸಂತಿ ಗಂಗಾಧರ್ ವೇದಿಕೆಯಲ್ಲಿದ್ದರು. ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಮೇಲ್ಕಾರ್, ಕೈಕಂಬದ ಪೂಂಜ ಮೈದಾನ ಹಾಗೂ ಬಂಟ್ವಾಳ ವಿದ್ಯಾಗಿರಿಯಿಂದ ವಿದ್ಯಾರ್ಥಿಗಳು, ಎನ್.ಎಸ್.ಎಸ್., ಎನ್.ಸಿ.ಸಿ. ತಂಡ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ಜಾಥಾ ನಡೆಯಿತು. ಪ್ಲಾಸ್ಟಿಕ್ ಜಾಗೃತಿ ಮೂಡಿಸುವ ಹಲವು ಫಲಕಗಳನ್ನು ಹೊತ್ತುಕೊಂಡು ಅಂಗಡಿ ಮುಂಗಟ್ಟುಗಳಿಗೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ದುಷ್ಪರಿಣಾಮಗಳ ಸಂದೇಶವನ್ನು ನೀಡಿದರು. ಮೇಲ್ಕಾರಿನ ಎಮಿನೆಂಟ್ ಎಜುಕೇಶನ್ ಇನ್ಸ್ ಟಿಟ್ಯೂಟ್, ಬಂಟ್ವಾಳ ಎಸ್.ವಿ.ಸ್. ಶಿಕ್ಷಣ ಸಂಸ್ಥೆ, ಬಿಆರ್.ಎಂ.ಪಿ. ಶಾಲೆ, ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಶಾಲೆ, ಜೋಡುಮಾರ್ಗ ಜೇಸಿ, ಎಸ್.ಕೆ.ಎಸ್.ಎಸ್.ಎಫ್. ಸದಸ್ಯರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೇಸಿಯ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡರು. ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಜಾಥಾ ನೇತೃತ್ವ ವಹಿಸಿದ್ದರು.
Be the first to comment on "ಸ್ವಚ್ಛತೆ, ಶಾಂತಿಗೆ ಪ್ರಥಮ ಆದ್ಯತೆ: ಶಾಸಕ ರಾಜೇಶ್ ನಾಯ್ಕ್"