www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ಪುರಸಭೆಯ ಹಳೇ ಕಟ್ಟಡದಲ್ಲಿ ಕಸ ವಿಲೇವಾರಿಗೆ ಮನೆ ಮನೆಗಳಿಗೆ ಹಂಚಲೆಂದು ದಾಸ್ತಾನಿರಿಸಲಾದ ಬಕೆಟ್ ಗಳು, ಹಾಗೂ ಉಪಯೋಗಿಸಲ್ಪಟ್ಟ ಟ್ಯೂಬ್ ಲೈಟ್ ಮತ್ತು ಇತರ ವಸ್ತುಗಳ ರಾಶಿಯನ್ನು ಸೋಮವಾರ ಮಧ್ಯಾಹ್ನ ಪರಿಶೀಲಸಿದ ರಾಜೇಶ್ ನಾಯ್ಕ್, ತಕ್ಷಣ ವಿಲೇವಾರಿ ನಡೆಸಲು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರಿಗೆ ಸೂಚಿಸಿದ್ದಾರೆ.
ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ತೆರಳುವ ಮುನ್ನ ಹಳೇ ಕಟ್ಟಡದ ದಾಸ್ತಾನನ್ನು ಶಾಸಕ ಪರಿಶೀಲಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಸ್ವಚ್ಛತಾ ಕಾರ್ಯಕ್ರಮಗಳನ್ನು ಬಂಟ್ವಾಳ ಪುರಸಭೆಯ ವ್ಯಾಪ್ತಿಯಾದ್ಯಂತ ನಡೆಸುತ್ತಿರುವ ಬಂಟ್ವಾಳ ಪುರಸಭೆಯ ಒಳಗೇ ವಿಲೇವಾರಿಯಾಗದ ವೇಸ್ಟ್ ಗಳ ರಾಶಿ ಇದೆ. ಇದನ್ನು ಮೊದಲು ವಿಲೇವಾರಿ ಮಾಡದೆ ಉಳಿದೆಡೆ ಸ್ವಚ್ಛತಾ ಜಾಥಾ, ಕಾರ್ಯಕ್ರಮಗಳನ್ನು ಮಾಡಿ ಏನು ಪ್ರಯೋಜನ, ಊರವರಿಗೆ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಹೇಳುವ ಬದಲು ಪುರಸಭೆಯೇ ನಾಗರಿಕರಿಗೆ ಬಕೆಟ್ ಕೊಡುವ ಕಾರ್ಯವನ್ನು ನಡೆಸಿಲ್ಲ ಎಂದು ಗಮನ ಸೆಳೆದರು.
ಈ ಸಂದರ್ಭ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದ ಶಾಸಕರು, ಇಷ್ಟು ಸಮಯ ಯಾಕೆ ಬಕೆಟ್ ಗಳನ್ನು ವಿಲೇವಾರಿ ಮಾಡದೆ ಹಾಗೆಯೇ ಉಳಿಸಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲಿದ್ದ ಟ್ಯೂಬ್ ಲೈಟ್, ಬಾಟಲಿಗಳು ಹಾಗೂ ಇನ್ನಿತರೆ ವಸ್ತುಗಳನ್ನು ನೋಡಿದ ಶಾಸಕರು, ಇದನ್ನೆಲ್ಲ ಯಾವಾಗ ವಿಲೇವಾರಿ ಮಾಡುತ್ತೀರಿ ಎಂದು ಪ್ರಶ್ನಿಸಿ, ಹೀಗೆ ಮಾಡಿದರೆ ಪುರಸಭೆ ಮಾದರಿಯಾಗಿರಲು ಹೇಗೆ ಸಾಧ್ಯ, ಹಳೇ ವಸ್ತುಗಳನ್ನು ಶೀಘ್ರ ವಿಲೇವಾರಿ ಮಾಡಿ, ಬಕೆಟ್ ಗಳನ್ನು ಸಾರ್ವಜನಿಕರಿಗೆ ಒದಗಿಸುವ ಕಾರ್ಯ ನಡೆಸಿ ಎಂದು ಸೂಚಿಸಿದರು.
ಈ ಸಂದರ್ಭ ಉತ್ತರಿಸಿದ ಮುಖ್ಯಾಧಿಕಾರಿ ಹೊಸ ಕೊಠಡಿ ನಿರ್ಮಾಣಕ್ಕೆ ಅನುದಾನ ಇಡಲಾಗಿದ್ದು, ಚುನಾವಣೆ ಬಂದ ಕಾರಣ ಕೆಲಸ ಆರಂಭವಾಗಿಲ್ಲ. ಉಪಯೋಗಿಸಿ ಹಾಳಾಗಿ ದಾಸ್ತಾನಿರಿಸಲಾದ ವಸ್ತುಗಳನ್ನು ಟೆಂಡರ್ ಮೂಲಕ ವಿಲೇವಾರಿ ಮಾಡುತ್ತೇವೆ ಎಂದು ಉತ್ತರಿಸಿದರು. ಸಭೆಯಲ್ಲಿ 600 ಬಕೆಟ್ ಗಳು ವಿತರಣೆಯಾಗದೆ ಉಳಿದಿವೆ ಎಂದಿದ್ದೀರಿ ಆದರೆ ಇಲ್ಲಿ ಅದಕ್ಕಿಂತಲೂ ಜಾಸ್ತಿ ಇದ್ದು ನಾಗರಿಕರಿಗೆ ನಿಜ ಅರ್ಥದ ಸೇವೆಯನ್ನು ಕೈಗೊಳ್ಳುವ ಮೂಲಕ ಆಡಳಿತ ಯಂತ್ರ ಮಾದರಿಯಾಗಿರಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದರು. ಈ ಸಂದರ್ಭ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಇದ್ದರು.
Be the first to comment on "ಪುರಸಭೆ ಕಟ್ಟಡದಲ್ಲಿ ಬಕೆಟ್ ರಾಶಿ: ತತ್ ಕ್ಷಣ ವಿಲೇವಾರಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ"