www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪುರಸಭೆ ಬಂಟ್ವಾಳ ನೇತೃತ್ವದಲ್ಲಿ ಜೇಸಿ ಬಂಟ್ವಾಳ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಬಂಟ್ವಾಳ, ಭದ್ರಾ ಗ್ಯಾಸ್ ಏಜನ್ಸಿ ಸಹಯೋಗದಲ್ಲಿ ಶುಕ್ರವಾರ ಬೆಳಗ್ಗೆ ಬಂಟ್ವಾಳದ ಬಡ್ಡಕಟ್ಟೆ ಬಸ್ ನಿಲ್ದಾಣ ಮತ್ತು ಮಾರ್ಕೆಟ್ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ ಹಲವು ಬದಲಾವಣೆಗಳಿಗೆ ಮುನ್ನುಡಿ ಬರೆಯಿತು.
ಅಕ್ಟೋಬರ್ 2ರಂದು ನಡೆಯುವ ಸ್ವಚ್ಛತಾ ಆಂದೋಲನ, ಜಾಗೃತಿಗೆ ಪೂರ್ವಭಾವಿಯಾಗಿ ಪುರಸಭೆಯ ಹಲವು ಪ್ರದೇಶಗಳಲ್ಲಿ ಈ ಕಾರ್ಯಕ್ರಮವನ್ನು ಸಾರ್ವಜನಿಕ ಸಂಸ್ಥೆಗಳೊಂದಿಗೆ ಬಂಟ್ವಾಳ ಪುರಸಭೆ ಹಮ್ಮಿಕೊಂಡಿದ್ದು, ಬಡ್ಡಕಟ್ಟೆಯ ಪರಿಸರದಲ್ಲಿ ಜಾಗೃತಿ ಮೂಡಿಸುವ ಕುರಿತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಲಹೆ ನೀಡಿದಂತೆ ಶುಕ್ರವಾರ ಬೆಳಗ್ಗೆ ಈ ಅಭಿಯಾನ ನಡೆಯಿತು.
ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಹಾಗೂ ಇಡೀ ಪುರಸಭೆಯ ಸಿಬ್ಬಂದಿ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮತ್ತು ಭದ್ರಾ ಗ್ಯಾಸ್ ಏಜನ್ಸಿ ಮಾಲೀಕ ಮಂಜುನಾಥ ಆಚಾರ್ಯ, ಭದ್ರಾ ಗ್ಯಾಸ್ ಏಜನ್ಸಿಯ ಸಿಬ್ಬಂದಿ, ಜೇಸಿ ಬಂಟ್ವಾಳ ಅಧ್ಯಕ್ಷ ದಯಾನಂದ ರೈ, ಕಾರ್ಯದರ್ಶಿ ಉಮೇಶ್ ಆರ್ ಮೂಲ್ಯ, ಕೋಶಾಧಿಕಾರಿ ಉಮೇಶ್ ಮಾರ್ನಬೈಲ್, ಸದಸ್ಯರಾದ ಡಾ. ಬಾಲಕೃಷ್ಣ, ದೀಪಕ್ ಸಾಲ್ಯಾನ್, ವೆಂಕಟೇಶ್, ಶ್ರೀನಿವಾಸ್, ಸಂತೋಷ್ ಜೈನ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಸದಸ್ಯರಾದ ವೆಂಕಟೇಶ್ ಬಂಟ್ವಾಳ್, ಮೌನೇಶ ವಿಶ್ವಕರ್ಮ, ಸಂದೀಪ್ ಸಾಲ್ಯಾನ್, ಅಬ್ದುಲ್ ರಹಿಮಾನ್ ತಲಪಾಡಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಸಹಿತ ಸಾರ್ವಜನಿಕರು ಪಾಲ್ಗೊಂಡರು.
ಬಸ್ ತಂಗುದಾಣಕ್ಕೆ ಹೊಸರೂಪ:
ಮೀನು ಮಾರುಕಟ್ಟೆ ಸಹಿತ ಪರಿಸರವನ್ನು ಸ್ವಚ್ಛಗೊಳಿಸಿದ ಬಳಿಕ ಬಡ್ಡಕಟ್ಟೆ ಬಸ್ ನಿಲ್ದಾಣದತ್ತ ಸಾಗಿದ ತಂಡಕ್ಕೆ ನಿಲ್ದಾಣದಲ್ಲೇ ಕಸದ ರಾಶಿ ಕಂಡುಬಂತು. ಸಾರ್ವಜನಿಕರಿಗೆ ಉಪಯೋಗಕ್ಕೇ ಇಲ್ಲದಂತೆ ಇದ್ದೂ ಇಲ್ಲದಂತಿರುವ ಬಸ್ ತಂಗುದಾಣವನ್ನಿಡೀ ಕೇವಲ ಅರ್ಧ ಗಂಟೆಯಲ್ಲಿ ಸ್ವಚ್ಛಗೊಳಿಸಲಾಯಿತು. ಅಡ್ಡ ಬಂದ ಮರದ ಅಪಾಯಕಾರಿ ರೆಂಬೆಗಳನ್ನು ಕತ್ತರಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಅನುಕುಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಯಿತು.
ಸ್ಥಳದಲ್ಲಿದ್ದ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಬಸ್ ತಂಗುದಾಣಕ್ಕೆ ಹೊಸರೂಪ ನೀಡುವ ಕುರಿತು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಜೊತೆ ಚರ್ಚಿಸಿದರು. ರೋಟರಿ ಕ್ಲಬ್ ಬಂಟ್ವಾಳ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಬಡ್ಡಕಟ್ಟೆ ಬಸ್ ತಂಗುದಾಣವನ್ನು ಮಾದರಿ ತಂಗುದಾಣವನ್ನಾಗಿ ರೂಪಿಸುವಲ್ಲಿ ಪುರಸಭೆಯ ಸಹಕಾರದೊಂದಿಗೆ ಪ್ರಾಯೋಜಕತ್ವ ವಹಿಸುವ ಕುರಿತು ಅಧ್ಯಕ್ಷರು ತಿಳಿಸಿದರು.
ಬಸ್ ತಂಗುದಾಣಕ್ಕೆ ಸೂರು, ಬಣ್ಣ, ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಿ, ಅಕ್ಟೋಬರ್ ೨ರಂದು ಸಾರ್ವಜನಿಕರಿಗೆ ಬಿಟ್ಟುಕೊಡುವ ಕುರಿತು ತೀರ್ಮಾನಿಸಲಾಯಿತು. ಪ್ರತಿ ಬಸ್ಸುಗಳು ತಂಗುದಾಣ ಬಳಿಯೇ ನಿಲ್ಲಬೇಕು, ರಸ್ತೆಯಲ್ಲಿ ನಿಲ್ಲದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಯಿತು. ಶೌಚಾಲಯ ಸ್ವಚ್ಛತೆ, ಸ್ಥಳದಲ್ಲಿ ಪೇ ಪಾರ್ಕಿಂಗ್ ಮಾಡಲು ಸೂಚಿಸಿದ ಮುಖ್ಯಾಧಿಕಾರಿ, ಬಸ್ ತಂಗುದಾಣದಲ್ಲಿ ಸೊತ್ತುಗಳನ್ನು ದಾಸ್ತಾನಿರಿಸಿದವರಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದರು. ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರಿಗೆ ನೋಟಿಸ್ ನೀಡುವುದಾಗಿ ಎಚ್ಚರಿಸಿದರು. ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ ಕೊಡುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
Be the first to comment on "ಬಡ್ಡಕಟ್ಟೆ ಬಸ್ ತಂಗುದಾಣಕ್ಕೆ ಹೊಸರೂಪ – ಸ್ವಚ್ಛತಾ ಆಂದೋಲನದ ಫಲ"