ಗ್ರಾಮಾಂತರ ಭಾಗದ ಪಡಿತರ ಅಂಗಡಿಗಳಲ್ಲಿ ಉಂಟಾಗಿರುವ ಸರ್ವರ್ ಸಮಸ್ಯೆಯಿಂದಾಗಿ ಕಾರ್ಡುದಾರರು ಪಡಿತರ ಅಕ್ಕಿಗಾಗಿ ಅಲೆಯುವಂತಹ ಸಮಸ್ಯೆಗಳನ್ನು ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರೋಜೆಕ್ಟ್, ಸುಗ್ರಾಮ ಸಂಘದ ಸಹಭಾಗಿತ್ವದಲ್ಲಿ ನಡೆದ ತಾಲೂಕು ಮಟ್ಟದ ಸುಗ್ರಾಮ ಸಂವಾದದಲ್ಲಿ ಭಾಗವಹಿಸಿ ಆಹಾರ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದರು. ಮಹಾತ್ಮಾ ಗಾಂಧೀ ನರೇಗಾ ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕಿ ಕುಸುಮ, ತಾಲೂಕು ಪಂಚಾಯತ್ ಅಧಿಕಾರಿ ಅಶೋಕ್, ಮಹಾತ್ಮ ಗಾಂಧೀ ನರೇಗಾ ಮಾಜಿ ಓಂಬುಡ್ಸ್ಮೆನ್ ಶೀನ ಶೆಟ್ಟಿ, ಮಹಾತ್ಮಾ ಗಾಂಧೀ ನರೇಗಾ, ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಆಲಿಸಿ ಪರಿಹಾರೋಪಾಯಗಳನ್ನು ಸೂಚಿಸಿ ಸಂವಾದ ನಡೆಸಿದರು. ಸುಗ್ರಾಮ ಅಧ್ಯಕ್ಷೆ ದಾಕ್ಷಾಯಿಣಿ ಸೇರಿದಂತೆ ೧೩ ಪಂಚಾಯತ್ಗಳ ೩೧ ಮಂದಿ ಸದಸ್ಯೆಯರು ಭಾಗವಹಿಸಿದ್ದರು. ಸಂಯೋಜಕರಾದ ಚೇತನ್ ಕುಮಾರ್ ಸಂವಾದ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾವೇರಿ, ಪದ್ಮಿನಿ ಸಹಕರಿಸಿದರು.
Be the first to comment on "ಪಡಿತರ ಅಂಗಡಿಗಳ ಸರ್ವರ್ ಸಮಸ್ಯೆ ನಿವಾರಣೆಗೆ ಕ್ರಮ: ತಹಶೀಲ್ದಾರ್"