ಬಂಟ್ವಾಳನ್ಯೂಸ್ ಓದಿದವರು 10 ಲಕ್ಷಕ್ಕೂ ಅಧಿಕ, ನಿಮಗೆ ಕೋಟಿ ನಮಸ್ಕಾರ

 

ಹರೀಶ ಮಾಂಬಾಡಿ, ಸಂಪಾದಕ

ಆತ್ಮೀಯ ಓದುಗರೇ,

ಆರಂಭಗೊಂಡು 1 ವರ್ಷ, 10 ತಿಂಗಳು, 11 ದಿನಗಳಾದ ಬಳಿಕ ನಿಮ್ಮ ನೆಚ್ಚಿನ ಜಾಲತಾಣ ಬಂಟ್ವಾಳನ್ಯೂಸ್  ಓದಿದವರ ಸಂಖ್ಯೆ 10 ಲಕ್ಷ ದ ಗಡಿ ದಾಟಿತು.

ವೆಬ್ ಪತ್ರಿಕೆ ಆರಂಭಗೊಳ್ಳುವ ಸಂದರ್ಭ, ನೆಟ್ ಪ್ಯಾಕ್ ಗಳು ಅಗ್ಗದಲ್ಲಿ ಸಿಗಲು ಆರಂಭಗೊಂಡಿದ್ದವಷ್ಟೇ. ಆದರೂ ಪ್ರೀತಿಯಿಂದ ಸುದ್ದಿಗಳನ್ನು ಓದಿ, ಮತ್ತೊಬ್ಬರಿಗೆ ಹಂಚಿದವರಿಗೆ ಥ್ಯಾಂಕ್ಸ್. ವಿಶೇಷವಾಗಿ ಫೇಸ್ ಬುಕ್, ಟ್ವಿಟ್ಟರ್ ಮೂಲಕ ಓದುತ್ತಿರುವ ಹೊರನಾಡು, ಹೊರದೇಶಗಳ ಬಂಟ್ವಾಳಿಗರಿಗೆ ಧನ್ಯವಾದ.

ಮುದ್ರಣ ಮಾಧ್ಯಮದಲ್ಲಿ ಹದಿನೆಂಟು ವರ್ಷಗಳ ಅನುಭವ ಹೊಂದಿದ ನನಗೆ ಈಗಲೂ ಪತ್ರಿಕೋದ್ಯಮದಲ್ಲಿ ಕಲಿಯುವುದು ಬಹಳಷ್ಟಿದೆ. ಇದರಲ್ಲಿ ವೆಬ್ ಪತ್ರಿಕೆ ಆರಂಭಿಸಿದ್ದು ಪ್ರಾಯೋಗಿಕವಾಗಿಯೇ. ಯಾವುದೇ ಆರ್ಥಿಕ ಬಂಡವಾಳ ಇಲ್ಲದೆ, ಕೇವಲ ಬರವಣಿಗೆಯನ್ನಷ್ಟೇ ನೆಚ್ಚಿ ಆರಂಭಿಸಿದ ಬಂಟ್ವಾಳ ನ್ಯೂಸ್ ಎಂಬ ಬಂಟ್ವಾಳ ತಾಲೂಕಿನ ಪ್ರಥಮ ವೆಬ್ ಪತ್ರಿಕೆ ಯನ್ನು ನೀವೆಲ್ಲ ಓದುತ್ತಿದ್ದೀರಿ ಎನ್ನುವುದೇ ಖುಷಿ ಹಾಗೂ ಉತ್ಸಾಹದಾಯಕ ವಿಚಾರ.

ತಾಲೂಕಿನ ದೈನಂದಿನ ಸುದ್ದಿ ನೀಡುವ ಮೊತ್ತಮೊದಲ ಜಾಲತಾಣವಾಗಿ ನಮ್ಮೂರ ವಿಚಾರಗಳನ್ನು ಜಗತ್ತಿಗೆ ತಿಳಿಸುವ ಕಾರ್ಯವನ್ನು www.bantwalnews.com ಮೂಲಕ 2016, ನವೆಂಬರ್ 10ರಂದು ಆರಂಭಿಸಲಾಗಿತ್ತು.

ಖಚಿತ ಸುದ್ದಿ, ನಿಖರ ಮಾಹಿತಿ, ಸ್ಪಷ್ಟ ನಿರೂಪಣೆಯೊಂದಿಗೆ ನಿಮ್ಮ ಮುಂದೆ ದಿನದ ಪ್ರಮುಖ ಘಟನಾವಳಿಗಳನ್ನು ಒದಗಿಸುವ ಬಂಟ್ವಾಳನ್ಯೂಸ್ ಎರಡನೇ ವರ್ಷದ ಹುಟ್ಟುಹಬ್ಬಕ್ಕೆ ಕಾಲಿಡುವ ಮುನ್ನವೇ 10 ಲಕ್ಷ ಮಂದಿ ಈ ವೆಬ್  ಅನ್ನು ಕ್ಲಿಕ್ ಮಾಡಿದ್ದಾರೆ. ಅದಕ್ಕೂ ಜಾಸ್ತಿ ಮಂದಿ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

ವೆಬ್ ಪತ್ರಿಕೆಯನ್ನು ಆರಂಭಗೊಂಡ ಸಂದರ್ಭ, ತಾಲೂಕಿನ ಮೊದಲ ವೆಬ್ ಪತ್ರಿಕೆಯಾದ ಕಾರಣ, ಎಚ್ಚರಿಕೆಯ ನುಡಿಗಳೊಂದಿಗೆ ಬೆನ್ನು ತಟ್ಟಿದ ಊರ, ಪರವೂರ ಪತ್ರಕರ್ತ ಸ್ನೇಹಿತರಿಗೆ, ಸದಾ ಬೆಂಬಲಕ್ಕೆ ನಿಂತು ವೆಬ್ ಬೆಳವಣಿಗೆಗೆ ಪೂರ್ಣ ಸಹಕಾರ ನೀಡುತ್ತಿರುವ ಬಂಟ್ವಾಳ, ವಿಟ್ಲದ ಎಲ್ಲ ಪತ್ರಕರ್ತ, ಮಾಧ್ಯಮ ಸ್ನೇಹಿತರಿಗೆ ನಾನು ಕೃತಜ್ಞನಾಗಿದ್ದೇನೆ.  ಆರಂಭಿಕ ಅಂಕಣಗಳನ್ನು ಒದಗಿಸಿ ಬೆನ್ನು ತಟ್ಟಿದ ಹಿರಿಯ ಸಾಹಿತಿ, ಲೇಖಕರಿಗೆ, ಬಿ.ಸಿ.ರೋಡ್, ಕೈಕಂಬ, ವಿಟ್ಲ, ಮಂಗಳೂರು ಸಹಿತ ಹಲವು ಊರುಗಳಲ್ಲಿರುವ ಗೆಳೆಯರು ಈ ಪತ್ರಿಕೆ ಅಂಬೆಗಾಲಿಕ್ಕಿ ನಡೆಯಲು ಕೈಹಿಡಿದವರು. ಜಾಹೀರಾತನ್ನು ನೀಡುವ ಮೂಲಕ ವೆಬ್ ಪತ್ರಿಕೆಗೆ ಆರ್ಥಿಕ ಶಕ್ತಿಯನ್ನು ಒದಗಿಸಿದ ಸ್ನೇಹಿತರಿಗೆ ಸದಾ ಆಭಾರಿ.

ಆರ್ಥಿಕವಾಗಿ ದೊಡ್ಡ ಲಾಭವನ್ನು ತಂದುಕೊಡದಿದ್ದರೂ ಬಂಟ್ವಾಳನ್ಯೂಸ್ ವೆಬ್ ಪತ್ರಿಕೆ ತಾಲೂಕಿನ ಮೊದಲ ವೆಬ್ ಪತ್ರಿಕೆಯಾಗಿ ಆರಂಭಗೊಳ್ಳುವ ಮೂಲಕ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿತು. ವೆಬ್ ಕುರಿತು ಅನುಮಾನವಿದ್ದವರೂ ಈ ಕಡೆಗೆ ಚಿತ್ತಹರಿಸಿದ್ದು, ಹಲವರು ಈ ಕುರಿತು ಸಲಹೆಗಳನ್ನು ಕೇಳಿದ್ದೂ ಉಂಟು. ಇದು ಆರಂಭಿಕ ಸಕ್ಸಸ್ ಎಂದು ಭಾವಿಸುತ್ತೇನೆ. ಹಲವರಿಗೆ ಬಂಟ್ವಾಳನ್ಯೂಸ್ ಸ್ಫೂರ್ತಿಯಾದದ್ದು ಸಂತೋಷದಾಯಕ ಹಾಗೂ ಮತ್ತಷ್ಟು ಹೊಸ ಸಾಹಸಗಳಿಗೆ ಬಂಟ್ವಾಳನ್ಯೂಸ್ ಪ್ರೇರಣೆ ನೀಡಿದ್ದು ಖುಷಿ ತಂದ ವಿಚಾರ.

ಬಂಟ್ವಾಳದ ಹಲವು ಕ್ರಿಯಾಶೀಲ ಬೆಳವಣಿಗೆಗೆ ಬಂಟ್ವಾಳನ್ಯೂಸ್ ವರದಿಗಳೂ ಪೂರಕವಾಗಿದೆ ಎಂಬುದನ್ನು ಓದುಗರೇ ದೂರವಾಣಿ ಮೂಲಕ ತಿಳಿಸುವ ಮೂಲಕ ಮತ್ತಷ್ಟು ಶಕ್ತಿಯೊದಗಿಸಿದ್ದೂ ನಿಜ.  ಪತ್ರಿಕೆ ದೈನಂದಿನ ಅಪ್ ಡೇಟ್ ಗಳನ್ನು ಒದಗಿಸುವ ನಿರ್ಧಾರಕ್ಕೆ ಮತ್ತಷ್ಟು ಬಲ ಒದಗಿಸಿದೆ.

ಇದನ್ನು ಅಂದವಾಗಿ ವಿನ್ಯಾಸಗೊಳಿಸಿ ನಿರ್ವಹಣೆ ಮಾಡುತ್ತಿರುವ ಪುತ್ತೂರಿನ ದಿ ವೆಬ್ ಪೀಪಲ್  thewebpeople.in ಅವರಿಗೆ ಧನ್ಯವಾದ. ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ. ಹಾಗೆಯೇ ಹೊಸ ತಲೆಮಾರಿನ ವೆಬ್ ಪತ್ರಿಕೆಗಳಿಗೆ ನಿಮ್ಮ ಪ್ರೋತ್ಸಾಹವಿರಲಿ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ಬಂಟ್ವಾಳನ್ಯೂಸ್ ಓದಿದವರು 10 ಲಕ್ಷಕ್ಕೂ ಅಧಿಕ, ನಿಮಗೆ ಕೋಟಿ ನಮಸ್ಕಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*