ಇತ್ತೀಚೆಗೆ ಪ್ರಕೃತಿ ವಿಕೋಪದಿಂದ ತತ್ತರಗೊಂಡ ಕೊಡಗು ಜಿಲ್ಲಾ ನೆರೆ ಸಂತ್ರಸ್ತರ ನೆರವಿಗಾಗಿ ನಿಧಿ ಸಮರ್ಪಣೆಯ ಪ್ರಯುಕ್ತ ತುಳು ಯಕ್ಷ ಹಾಸ್ಯ ವೈಭವ ಕಾರ್ಯಕ್ರಮ ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಸೆ. 22ರಂದು ಶನಿವಾರ ಸಂಜೆ 5.30ರಿಂದ ಪ್ರದರ್ಶನಗೊಳ್ಳಲಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ತಂಡದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಕಲಾವಿದರು ಸಂಭಾವನೆ ಪಡೆದುಕೊಳ್ಳದೆ ಪ್ರದರ್ಶನ ನೀಡಲಿದ್ದು, ಸಿನಿಮಾ, ರಂಗ ಕಲಾವಿದರೂ ಆಗಿರುವ ಅರವಿಂದ ಬೋಳಾರ್ ಅವರೂ ಈ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರಪಾಡಿ ಅಶೋಕ್ ಶೆಟ್ಟಿ, ಕಾರ್ಯಕ್ರಮದಲ್ಲಿ ದಾನಿಗಳಿಂದ ಸಂಗ್ರಹಿತ ನಿಧಿಯನ್ನು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಸೇವಾ ಭಾರತಿ ಸಂಚಾಲಿತ ಕೊಡಗು ಜಿಲ್ಲಾ ನೆರ ಸಂತ್ರಸ್ತರ ನಿಧಿಗೆ ಸಮರ್ಪಿಸಲಾಗುವುದು. ದಾನಿಗಳ ಸಹಕಾರದಿಂದ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಕಲಾವಿದರು ಉಚಿತವಾಗಿ ಪ್ರದರ್ಶನ ನೀಡಲಿದ್ದಾರೆ. ಕಲಾಭಿಮಾನಿಗಳು ಸಹಕರಿಸಬೇಕಾಗಿ ಅವರು ವಿನಂತಿಸಿದ್ದಾರೆ. ಕಲಾವಿದ ಕೋಡಪದವು ದಿನೇಶ ಕುಮಾರ್ ಉಪಸ್ಥಿತರಿದ್ದರು.
Be the first to comment on "ಕೊಡಗು ನೆರೆ ಸಂತ್ರಸ್ತರಿಗೆ ಯಕ್ಷಗಾನ ಕಲಾವಿದರ ಸಾಥ್: ನಿಧಿ ಸಮರ್ಪಣೆಗೆ 22ರಂದು ಯಕ್ಷಹಾಸ್ಯ ವೈಭವ"