ಬಂಟ್ವಾಳತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶಿಕ್ಷಣ ಪ್ರೇಮಿಗಳಾದ ಪ್ರಕಾಶ್ ಅಂಚನ್ ಹಾಗೂ ಬೆಂಗಳೂರಿನ ಅನಿಲ್ ಶ್ಟೆಟ್ಟಿ ನೇತೃತ್ವದಲ್ಲಿ ರಾಜ್ಯದ ಸರಕಾರಿ ಶಾಲೆ ಉಳಿಸಿ ಅಭಿಯಾನ ಹಾಗೂ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸೆ.೮ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ವಿಧಾನ ಸೌಧದವರೆಗೆ ನಡೆಯಲಿರುವ ಕಾಲ್ನಡಿಗೆ ಜಾಥಕ್ಕೆ ಶಿಕ್ಷಣಾಸಕ್ತರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಾಲ್ನಡಿಗೆ ಜಾಥಕ್ಕೆ ಬೆಂಬಲವಾಗಿ ಈಗಾಗಲೇ ಮಿಸ್ಡ್‌ಕಾಲ್ ಅಭಿಯಾನ ನಡೆಸಲಾಗಿದ್ದು ಪೂರ್ವಭಾವಿಯಾಗಿ ದುರ್ಗಾ ಫ್ರೆಂಡ್ಸ್ ವತಿಯಿಂದ ವಿವಿಧ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವ ರಥಯಾತ್ರೆ ಸೆ.೫ರಿಂದ ಸಂಚರಿಸಲಿದೆ.
ಸೆ.೫ ರಂದು ಬೆಳಿಗ್ಗೆ ೭ ಗಂಟೆಗೆ ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ರಥಯಾತ್ರೆ ಆರಂಭಗೊಂಡು ಮಣಿಹಳ್ಳ, ಬಂಟ್ವಾಳ ಪೇಟೆಯಾಗಿ ಬೈಪಾಸ್ ಮೂಲಕ ಲೊರೆಟ್ಟೋ, ರಾಯಿ, ಸಿದ್ದಕಟ್ಟೆ, ಮೂಡಬಿದಿರೆ, ಅಲಂಗಾರು, ಬೆಳುವಾಯಿ, ಕಾರ್ಕಳ, ಉಡುಪಿ, ಬ್ರಹ್ಮಾವರ, ಸಾಸ್ತನ, ಕೋಟ, ತೆಕ್ಕಟ್ಟೆ, ಕೋಟೇಶ್ವರ, ಸಿದ್ದಾಪುರ, ಹೊಸಂಗಡಿ, ಹುಲಿಕಲ್, ಮಾಸ್ತಿಕಟ್ಟೆ ಯಡೂರ್, ಇಕ್ಕೆಬೈಲು ಮೂಲಕ ತೀರ್ಥಹಳ್ಳಿ ತಲುಪಲಿದೆ.
ಸೆ.೬ರಂದು ತೀರ್ಥಹಳ್ಳಿಯಿಂದ ಸಕ್ರೆಬೈಲು, ಶಿವಮೊಗ್ಗ, ತರಿಕೆರೆ, ಕಡೂರು ಸೆ.೭ ರಂದು ಕಡೂರಿನಿಂದ ಬಾಣಾವರ, ಬೆಂಡೆಕೆರೆ, ಅರಸಿನಕೆರೆ, ತಿಪಟೂರು, ಬಿಲಿಗೆರೆ, ಯಗಚಿಕಟ್ಟೆ, ನಿಟ್ಟೂರು, ಗುಬ್ಬಿ, ಸಿಂಗನಹಳ್ಳಿ, ಹೆಗೆರೆ, ಮಂಡಿಪೇಟೆ, ತುಮಕೂರು, ದಾಬಸ್‌ಪೇಟೆ, ಟಿ.ಬೇಗೂರು, ನೆಲಮಂಗಲ, ಯಶವಂತಪುರ, ಮಲ್ಲೇಶ್ವರಂ ಮೂಲಕ ಬೆಂಗಳೂರು ತಲುಪಲಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಕಾಲ್ನಡಿಗೆ ಜಾಥಕ್ಕೆ ಬೆಂಬಲವಾಗಿ ಕಳೆದ ಜುಲೈ ೧೮ರಂದು ಮಿಸ್ಡ್‌ಕಾಲ್ ಅಭಿಯಾನ ಆರಂಭಿಸಲಾಗಿತ್ತು. ಸರಕಾರಿ ಶಾಲೆ ಉಳಿಸಲು ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಣ ಪ್ರೇಮಿಗಳು ಮಿಸ್ಡ್‌ಕಾಲ್ ಕೊಟ್ಟು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈವರೆಗೆ ಸುಮಾರು ೨.೨೦ಲಕ್ಷ ಮಿಸ್ಡ್ ಕಾಲ್ ದಾಖಲಾಗಿರುವುದಾಗಿ ಸಂಘಟಕರು ತಿಳಿಸಿದ್ದಾರೆ.
ಸರಕಾರಿ ಶಾಲೆ ಉಳಿಸುವ ಅಭಿಯಾನದ ಅಂಗವಾಗಿ ಜನಜಾಗೃತಿಗಾಗಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಕಳೆದ ಆ.೨೬ರಂದು ಬೃಹತ್ ವಾಹನ ಜಾಥ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಿಂದ ಬೆಳ್ತಂಗಡಿಯವರೆಗೆ ನಡೆದಿತ್ತು. ಬೆಳ್ತಂಗಡಿಯ ಹಿಂದೂ ಯುವ ಶಕ್ತಿ ಆಲಡ್ಕ ಹಾಗೂ ವೀರಕೇಸರಿ ಸಂಘಟನೆಗಳ ಸಹಯೋಗದಲ್ಲಿ ವಾಹನ ಜಾಥ ನಡೆದಿದ್ದು ನೂರಾರು ಮಂದಿ ಶಿಕ್ಷಣ ಪ್ರೇಮಿಗಳು ಈ ಜಾಥದಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ವಾಹನ ಜಾಥ ಸಮಾಪನಗೊಂಡಿದ್ದು ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
Be the first to comment on "ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ರಥಯಾತ್ರೆ"