www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಧರ್ಮಸ್ಥಳದ ಕನ್ಯಾಡಿಯ ಶ್ರೀ ರಾಮ. ಕ್ಷೇತ್ರದಲ್ಲಿ ಸೆ.3 ರಂದು ನಡೆಯುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮಸಂಸದ್ ಗೆ ಈಗಾಗಲೇ ಸಿದ್ದತೆ ಭರದಿಂದ ಸಾಗುತ್ತಿದ್ದು, ಬಂಟ್ವಾಳ ತಾಲೂಕಿನಿಂದ ಸುಮಾರು ೧೦ ಸಾವಿರ ಭಕ್ತರು ಭಾಗವಹಿಸಲಿದ್ದಾರೆ ಎಂದು ರಾಷ್ಟ್ರೀಯ ಧರ್ಮ ಸಂಸದ್ ನ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಕೇಶವ ಶಾಂತಿ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು ಪೂರ್ವಾಶ್ರಮದಲ್ಲಿ ಬಂಟ್ವಾಳ ತಾಲೂಕಿನವರೇ ಅಗಿದ್ದರಿಂದ ತಾಲೂಕಿನಲ್ಲೂ ಸಮಿತಿ ರಚಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲಾಗಿತ್ತಿದೆ, ಜನರಿಂದಲೂ ಉತ್ತಮ ಸ್ಪಂದನೆ, ಸಹಕಾರ ದೊರೆತಿದೆಎಂದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಧರ್ಮಸಂಸದನ್ನು ಉದ್ಘಾಟಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಭಾಧ್ಯಕ್ಷತೆ ವಹಿಸುವರು.ಕೇಂದ್ರ ಸಚಿವರಾದ ಪ್ತಕಾಶ್ ಜಾವಡೇಕರ್, ಡಿ.ವಿ.ಸದಾನಂದಗೌಡ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲ್,ಶೋಭಾ ಕರಂದ್ಲಾಜೆ,ಬಿ.ಕೆ.ಹರಿಪ್ರಸಾದ್, ನವದೆಹಲಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ ನಿರ್ದೇಶಕ ಡ.ಎಸ್.ಪಿ. ಶರ್ಮಾ ಅವರು ಅತಿಥಿಯಾಗಿಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
2000 ಸ್ವಾಮೀಜಿಗಳು:
ಈ ಧರ್ಮ ಸಂಸದ್ ನಲ್ಲಿ ಸುಮಾರು ಎರಡು ಸಾವಿರ ಸಂತರು ಭಾಗವಹಿಸುವರು. ಅಯೋಧ್ಯೆಯಿಂದಲೇ ಸುಮಾರು 400 ಮಂದಿ ಸಾಧುಗಳು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು, ಧಾರ್ಮಿಕ, ಸಾಮಾಜಿಕ ಮುಖಂಡರು,ಹಲವಾರು ಗಣ್ಯರು ಸಹಿತ ಸುಮಾರು ಐವತ್ತು ಸಾವಿರ ಮಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ರಾಮ ಕ್ಷೇತ್ರದ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ತಿಳಿಸಿದ್ದಾರೆ.
ಬೆಳ್ತಂಗಡಿಯಿಂದ ಹೊರೆಕಾಣಿಕೆ:
ಆಗಸ್ಟ್ 30 ರಂದು ಬೆಳ್ತಂಗಡಿಯಿಂದ ಕನ್ಯಾಡಿ ಕ್ಷೇತ್ರದ ವರೆಗೆ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸೆ.2ರಂದು ರಾಷ್ಟ್ರದಾದ್ಯಂತದಿಂದ ಅಗಮಿಸುವ ಸಾಧುಸಂತರು, ಯತಿವರ್ಯರು, ಮಹಾಮಂಡಲೇಶ್ವರರು ಹಾಗೂಧರ್ಮ ಪೀಠಾಧೀಶ್ವರರನ್ನು ಉಜಿರೆಯ ಜನಾರ್ಧನ ದೇವಸ್ಥಾನದಿಂದ ಶ್ರೀ ರಾಮಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು ಎಂದು ವಿವರಿಸಿದರು.
ಸೆ.3 ರಂದು ಬೆ.7ರಿಂದ9 ರವರೆಗೆ ಕ್ಷೇತ್ರದ ವೇ.ಮೂ.ಲಕ್ಷ್ಮೀಪತಿ ಗೋಪಾಲಾಚಾರ್ಯರ ನೇತೃತ್ವದಲ್ಲಿ ಶ್ರೀರಾಮ ತಾರಕ ಮಂತ್ರ ಯಜ್ಙ ಬಳಿಕ ಶ್ರೀಗಳ ಪಟ್ಟಾಭಿಷೇಕ ದಶಮಾನೋತ್ಸವ ನಡೆಯಲಿದ್ದು,ತದನಂತರ ರಾಷ್ಟ್ರೀಯ ಧರ್ಮಸಂಸದ್ ಆರಂಭವಾಗಲಿದೆ. ಕೊನೆಗೆ ಹಲವು ಪ್ರಮುಖ ನಿರ್ಣಯಗೊಳ್ಳಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಬೇಬಿ ಕುಂದರ್, ವಿಶ್ವನಾಥ ಬಿ., ರಾಮದಾಸ್ ಬಂಟ್ವಾಳ, ಗೋಪಾಲ ಸುವರ್ಣ, ಪ್ರಸಾದ್ ಗಾಣಿಗ ಕರ್ಬೆಟ್ಟು ಉಪಸ್ಥಿತರಿದ್ದರು.
Be the first to comment on "ರಾಷ್ಟ್ರೀಯ ಧರ್ಮಸಂಸದ್ ಗೆ ಬಂಟ್ವಾಳದಿಂದ 10 ಸಾವಿರ ಭಕ್ತರು ಭಾಗಿ"