ಮಳೆ ಕಡಿಮೆಯಾದಂತೆ ಚುನಾವಣೆ ಹವಾ – ಬಂಟ್ವಾಳ ಪುರಸಭೆಗೆ ಬಿಗ್ ಫೈಟ್

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಂಟ್ವಾಳ ಪುರಸಭೆಗೆ ಆಗಸ್ಟ್ 29ಕ್ಕೆ ಚುನಾವಣೆ. ಆ.10ರಿಂದ 17ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದ್ದು, ಆ.29ರಂದು ಮತದಾನ ನಡೆಯಲಿದೆ. ಸೆ.1ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಕಣ್ಣು ಮುಚ್ಚಿ ತೆಗೆಯುವುದರೊಳಗೆ ಓಟು ನಡೆದೇಬಿಡುತ್ತದೆ.  ದೊಡ್ಡ ಮಳೆ ಬಂದು ನಿಂತು ಹೋದ ಹಾಗೆ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಪುರಸಭೆ ಚುನಾವಣೆಗೆ ತಯಾರಿ. ಅದಾದ ಬಳಿಕ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕು. ಇದು ರಾಜಕೀಯ ಪಕ್ಷಗಳು ಹಾಗೂ ಕಾರ್ಯಕರ್ತರಿಗೆ ಚಿಂತೆಯ ವಿಷಯ.

ಇದೆಲ್ಲವನ್ನೂ ಬದಿಗಿರಿಸಿ, ಸದ್ಯಕ್ಕೆ ಬಂಟ್ವಾಳದ ಕಾಂಗ್ರೆಸ್, ಬಿಜೆಪಿ, ಎಸ್.ಡಿ.ಪಿ.ಐ. ಕಾರ್ಯಕರ್ತರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದುವರೆಗೂ ಅಧಿಕೃತವಾಗಿ ಈ ಮೂರು ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಲಭ್ಯ ಮಾಹಿತಿಯಂತೆ ಹಾಲಿ ಪುರಸಭೆಯ ಕೆಲವು ಸದಸ್ಯರು ಮರುಸ್ಪರ್ಧೆ ಬಯಸಿದ್ದಾರೆ ಎನ್ನಲಾಗಿದೆ. 23 ವಾರ್ಡುಗಳಿದ್ದ ಪುರಸಭೆಯಲ್ಲಿ ನಾಲ್ಕು ವಾರ್ಡುಗಳು ಜಾಸ್ತಿಯಾಗಿವೆ.

ಫ್ಲೆಕ್ಸ್ ತೆರವು:

ಚುನಾವಣೆಗೆ ದಿನಾಂಕ ಘೋಷಣೆಯಾದ ತಕ್ಷಣದಿಂದ ನೀತಿ ಸಂಹಿತೆಯು ಜಾರಿಯಾದ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾಗೊದ್ದ ವಿವಿಧ  ರಾಜಕೀಯಪಕ್ಷಗಳ ಭಾವಚಿತ್ರವುಳ್ಳ ಸಹಿತ ಎಲ್ಲಾ ಪ್ಲಕ್ಸ್,ಹೋರ್ಡಿಂಗ್ಸ್ ನ್ನ ಪುರಸಭಾಧಿಕಾರಿಗಳು ತೆರವುಗೊಳಿಸಿದ್ದಾರೆ. ಪುರಸಭಾ ಕಚೇರಿಯಲ್ಲಿ ಅಧ್ಯಕ್ಷ,ಉಪಾಧ್ಯಕ್ಷರ ಹಾಗೂ ಸ್ಥಾಯಿಸಮಿತಿ ಅಧ್ಯಕ್ಷರ ಕೊಠಡಿಗೂ ಬೀಗ ಹಾಕಲಾಗಿದ್ದು,ಅವರ ಹೆಸರಿನ ನಾಮಫಲಕಕ್ಕೆ  ಕಾಗದವನ್ನು ಹಚ್ಚಲಾಗಿದೆ.

ಪುರಸಭೆಯ ಇತಿಹಾಸ:

ಬಂಟ್ವಾಳ ಪುರಸಭೆಗೆ 43 ವರ್ಷಗಳ ಇತಿಹಾಸವಿದೆ. ಇಲ್ಲಿ 1975ರಿಂದ 1992ರವರೆಗೆ ಪೌರಸಮಿತಿ ಹಾಗೂ ಸಮಾನ ಮನಸ್ಕ ಚಿಂತನೆಯುಳ್ಳ ನಾಗರಿಕರ ತಂಡ ಅಧಿಕಾರಕ್ಕೆ ಬಂದಿತ್ತು. ಸ್ಪಷ್ಟವಾಗಿ ಕಾಂಗ್ರೆಸ್ – ಬಿಜೆಪಿ ಪಕ್ಷಗಳು ಪುರಸಭೆಯ ಪಾರಮ್ಯ ವಹಿಸತೊಡಗಲು ಆರಂಭಗೊಂಡದ್ದು, 1996ರಲ್ಲಿ. ಈ ಅವಧಿಯಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬಂತು. 2004ರಲ್ಲಿ ಬಿಜೆಪಿಯ  ಕೈಗೆ ಅಧಿಕಾರ ಲಭಿಸಿತು. 2008ರಿಂದ 2013ರವರೆಗೆ ಬಿಜೆಪಿ ಆಡಳಿತವಿದ್ದರೆ, 2013ರ ಕಳೆದ ಅವಧಿಯಲ್ಲಿ ಕಾಂಗ್ರೆಸ್ ವಶಕ್ಕೆ ಬಂಟ್ವಾಳ ಪುರಸಭೆ ಇತ್ತು. ಪೌರಸಮಿತಿಯಲ್ಲಿ ಸಿಪಿಐ, ಸಿಪಿಎಂ, ಜನತಾ. ಜನಸಂಘ ಹೀಗೆ ಸಮಾನ ಚಿಂತನೆಯ ನಾಗರಿಕರು ಒಂದಾಗಿದ್ದುದು ವಿಶೇಷ. ಆದರೆ ಕಾಲ ಬದಲಾದಂತೆ ರಾಜಕೀಯ ಆಸಕ್ತಿಗಳು ಗರಿಗೆದರಿದವು. ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಧಿಕಾರ ಲಭಿಸಿದವು. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಆಡಳಿತ ಮಾಡಿದ್ದರೆ, ಅದಕ್ಕಿಂತ ಹಿಂದಿನ ಅವಧಿಯಲ್ಲಿ ಬಿಜೆಪಿ.

1975ರಿಂದ 2018ರವರೆಗೆ

1975ರ ಜನವರಿ 1ರಿಂದ ಬಂಟ್ವಾಳ ಪುರಸಭೆ ಅಧ್ಯಕ್ಷರಾಗಿ ಎಸ್.ವಿಠಲ ರಾವ್ 1983, ಜೂನ್ 2ರವರೆಗೆ ಸೇವೆ ಸಲ್ಲಿಸಿದರು. 1975ರ ಏ.1ರಿಂದ 1979ರ ಜೂನ್ 27ರವರೆಗೆ ಬಿ.ಮಂಜುನಾಥ ಸಫಲ್ಯ ಉಪಾಧ್ಯಕ್ಷರಾಗಿದ್ದರೆ, 1979ರ ಜೂನ್ 28ರಿಂದ 1983 ಜೂನ್ 2ರವರೆಗೆ ಪಿ.ವಿಠಲ ಬಂಗೇರ ಉಪಾಧ್ಯಕ್ಷರಾಗಿದ್ದರು.

ಬಳಿಕ ಆಡಳಿತಾಧಿಕಾರಿಯಾಗಿ ಆರ್.ಕೆ. ರಾಜು ಮತ್ತು ಎನ್.ಎ.ಗೋಪಾಲಕೃಷ್ಣ 1984ರ ಜನವರಿ 11ರವರೆಗೆ ಕಾರ್ಯನಿರ್ವಹಿಸಿದರು.

1984, ಜನವರಿ 19ರಿಂದ 1988, ಡಿಸೆಂಬರ್ 31ರವರೆಗೆ ಪಿ.ದೇವದಾಸ ಶೆಣೈ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇದೇ ಸಂದರ್ಭ ತಿಮ್ಮಪ್ಪ ಸಫಲ್ಯ ಉಪಾಧ್ಯಕ್ಷರಾಗಿದ್ದರು.

ಆಡಳಿತಾಧಿಕಾರಿ ಭಾಸ್ಕರಾಚಾರಿ, ರಾಜ್ ದೀಪ್ ಸಕ್ಸೇನಾ 1988ರ ಡಿಸೆಂಬರ್ 31 ರಿಂದ 1990, ಮೇ 25ರವರೆಗೆ ಕಾರ್ಯನಿರ್ವಹಿಸಿದರು.

1990ರ ಮೇ 26ರಿಂದ 1992 ಜೂನ್ 18ರವರೆಗೆ ಬಿ.ವಿಶ್ವನಾಥ ನಾಯ್ಕ್ ಅಧ್ಯಕ್ಷ, ಎಂ.ಇಬ್ರಾಹಿಂ ಉಪಾಧ್ಯಕ್ಷರಾದರು. 1992ರ ಜುಲೈ 7ರಿಂದ 1995 ಮೇ 20ರವರೆಗೆ ಬಿ.ಸದಾನಂದ ಮಲ್ಲಿ ಅಧ್ಯಕ್ಷರಾದರು. ಈ ಸಂದರ್ಭ  ಪಿ.ವಿಠಲ ಬಂಗೇರ ಉಪಾಧ್ಯಕ್ಷರಾದರು.

ಆಡಳಿತಾಧಿಕಾರಿಗಳ ಕಾರ್ಯಭಾರ. ಸಿ.ಎಂ. ರಾಜೇಂದ್ರ, ಕೆ.ಸತ್ಯಸುಂದರ, ಸುರೇಂದ್ರನಾಥ್ ತೋನ್ಸೆ ಅವರು 1995ರ ಮೇ 20ರಿಂದ 1996, ನವೆಂಬರ್ 23ರವರೆಗೆ ಕಾರ್ಯನಿರ್ವಹಿಸಿದರು. ಅದಾದ ಬಳಿಕ ಮತ್ತೆ ಜನಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿದರು.

ನವೆಂಬರ್ 23, 1996ರಿಂದ 1999ರ ಮೇ 19ರವರೆಗೆ ಜೋಸ್ಫಿನ್ ಡಿಸೋಜ ಅಧ್ಯಕ್ಷೆ, ಖತೀಜಮ್ಮ ಉಪಾಧ್ಯಕ್ಷೆ, 1999ರ ಮೇ 20ರಿಂದ 2001ರ ನವೆಂಬರ್ 21ರವರೆಗೆ ಬಿ.ಸದಾನಂದ ಮಲ್ಲಿ ಅಧ್ಯಕ್ಷರಾದರೆ, ಎ.ಕೆ.ಅಬುಸಾಲಿಹ್  ಉಪಾಧ್ಯಕ್ಷರಾದರು.

2001ರ ನ.22ರಿಂದ 2001ರ ಡಿಸೆಂಬರ್ 31ರವರೆಗೆ ಕೃಷ್ಣಪ್ಪ ಪೂಜಾರಿ ಆಡಳಿತಾಧಿಕಾರಿಯಾದರು.2001ರ ಡಿಸೆಂಬರ್ 31ರಿಂದ 2004ರ ಜೂನ್ 30ರವರೆಗೆ ಜೋಹರಾ ಎ.ರಹಿಮಾನ್ ಅಧ್ಯಕ್ಷೆಯಾದರು.ಈ ಸಂದರ್ಭ ಬಿ.ಮೋಹನ್ ಉಪಾಧ್ಯಕ್ಷರಾದರು. 

2004ರ ಜುಲೈ 1ರಿಂದ ಆಗಸ್ಟ್ 9ರವರೆಗೆ ಬದರಿನಾಥ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

 2004ರ ಆಗಸ್ಟ್ 9ರಿಂದ 2006ರ ಡಿಸೆಂಬರ್ 12ರವರೆಗೆ ಬಿ.ದಿನೇಶ್ ಭಂಡಾರಿ ಅಧ್ಯಕ್ಷರಾದರು. ಈ ಸಂದರ್ಭ ಬಿ.ಯಶೋಧಾ ಉಪಾಧ್ಯಕ್ಷೆಯಾಗಿದ್ದರು. ಮತ್ತೆ ಡಿಸೆಂಬರ್ 30, 2006ರಿಂದ 2008ರ ಫೆ.20ರವರೆಗೆ ಡಾ.ಹರೀಶ್ ಕುಮಾರ್, ಎಚ್. ಬಸವರಾಜೇಂದ್ರ, ಎಸ್.ಕೃಷ್ಣಮೂರ್ತಿ, ಸಮೀರ್ ಶುಕ್ಲಾ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.

2008ರ ಫೆ.21ರಿಂದ 2010ರ ಆಗಸ್ಟ್ 20ರವರೆಗೆ ಬಿ.ಯಶೋಧಾ ಅಧ್ಯಕ್ಷರಾದರೆ, ಮೊಹಮ್ಮದ್ ಇಕ್ಬಾಲ್ ಉಪಾಧ್ಯಕ್ಷರಾದರು. 2010 ಆಗಸ್ಟ್ 20ರಿಂದ 2013 ಮಾರ್ಚ್ 24ರವರೆಗೆ ಬಿ.ದಿನೇಶ್ ಭಂಡಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರೆ, ಜಾನಕಿ ಕೆ.ಜೆ.ಗೋಪಾಲ ಉಪಾಧ್ಯಕ್ಷರಾದರು.

ಬಳಿಕ ಚುನಾವಣೆ ಅವಧಿಯಲ್ಲಿ 2013 ಮಾರ್ಚ್ 25ರಿಂದ 2013 ಸೆ.11ರವರೆಗೆ ಬಿ.ಸದಾಶಿವ ಪ್ರಭು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.  2013, ಸೆ.12ರಿಂದ 2016, ಮಾರ್ಚ್ 10ರವರೆಗೆ ವಸಂತಿ ಚಂದಪ್ಪ ಅಧ್ಯಕ್ಷರಾದರೆ, 2016, ಮಾರ್ಚ್ 10ರಿಂದ 2018 ಆಗಸ್ಟ್ 2ರವರೆಗೆ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷರಾದರು.ಈ ಸಂದರ್ಭ ಮೊದಲ ಅವಧಿಯಲ್ಲಿ ಯಾಸ್ಮೀನ್ ಮತ್ತು ಎರಡನೇ ಅವಧಿಯಲ್ಲಿ ಮೊಹಮ್ಮದ್ ನಂದರಬೆಟ್ಟು ಉಪಾಧ್ಯಕ್ಷರಾದರು.

 

 

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ಮಳೆ ಕಡಿಮೆಯಾದಂತೆ ಚುನಾವಣೆ ಹವಾ – ಬಂಟ್ವಾಳ ಪುರಸಭೆಗೆ ಬಿಗ್ ಫೈಟ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*