ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ಶ್ರವಣಶಕ್ತಿಯ ಕೊರತೆ ಇರುವವರಿಗಾಗಿ ನಡೆದ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಭಾಗವಹಿಸಿದ ಪುತ್ತೂರು ಜೀನಿಯಸ್ ಚೆಸ್ ಸ್ಕೂಲ್ ವಿದ್ಯಾರ್ಥಿನಿ, ಬಂಟ್ವಾಳ ಕಡೇಶಿವಾಲಯ ಹೈಸ್ಕೂಲಿನಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಯಶಸ್ವಿ ಕಂಚಿನ ಪದಕ ಗಳಿಸಿದ್ದಾಳೆ.
ಜುಲೈ 6ರಿಂದ 16ರವರೆಗೆ ಶ್ರವಣಶಕ್ತಿಯ ಕೊರತೆ ಇರುವ ಮಹಿಳೆಯರಿಗಾಗಿ ಇರುವ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಿದ್ದಳು. ಬುದ್ಧಿವಂತರ ಆಟವೆಂದೇ ಹೆಸರಾಗಿರುವ ಚದುರಂಗದಾಟ (ಚೆಸ್)ದಲ್ಲಿ ಫಿಡೆಯ 1300ನೇ ರೇಟಿಂಗ್ ಗಳಿಸಿರುವ ಯಶಸ್ವಿ ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಮತ್ತು ಬಂಟ್ವಾಳ ತಾಲೂಕಿನ ಸರಕಾರಿ ಶಾಲಾ ಶಿಕ್ಷಕಿ ಯಶೋಧಾ ದಂಪತಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಎರಡನೆಯವಳು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಚೆಸ್ ಪಂದ್ಯಾಕೂಟಕ್ಕೆ ತೆರಳುವ ಮುನ್ನ ಆಕೆಯನ್ನು ಗೌರವಿಸಿದ್ದರು.ಯಶಸ್ವಿ ಕಲಿಯುತ್ತಿರುವ ಕಡೇಶಿವಾಲಯ ಸರಕಾರಿ ಹೈಸ್ಕೂಲಿನಲ್ಲಿ ಆಕೆಯನ್ನು ಗುರುವಾರ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗಳಿಸಿರುವುದು ಶಾಲೆಯ ಮಟ್ಟಿಗೆ ಹೆಮ್ಮೆಯ ವಿಷಯವಾದ್ದರಿಂದ ಗ್ರಾಮೀಣ ಪ್ರತಿಭೆಯನ್ನು ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಸ್ವಾಗತಿಸಿದರು. ಯಶಸ್ವಿ ಸಾಧನೆಗೆ ಶಾಸಕ ರಾಜೇಶ್ ನಾಯ್ಕ್ ಅವರೂ ಅಭಿನಂದಿಸಿದ್ದಾರೆ.
ವಿಶೇಷ ಸಾಮರ್ಥ್ಯದವರಿಗೆ ಇರುವವರಿಗಷ್ಟೇ ಅಲ್ಲ, ಜನರಲ್ ವಿಭಾಗದಲ್ಲಿಯೂ ಯಶಸ್ವಿ ಪ್ರಶಸ್ತಿ ಗಳಿಸಿದವಳು. ಇದು ಆಕೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಯಿತು. ಇದೀಗ ಇಂಗ್ಲೆಂಡ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಯಶಸ್ವಿ ಕಂಚಿನ ಪದಕ ಗಳಿಸಿದ್ದು ಹೆಮ್ಮೆ ತಂದಿದೆ ಎಂದು ಜೀನಿಯಸ್ ಚೆಸ್ ಸ್ಕೂಲ್ ಸಂಸ್ಥಾಪಕ ಸತ್ಯಪ್ರಸಾದ್ ಕೋಟೆ ತಿಳಿಸಿದ್ದಾರೆ.
for more about Yashaswi Click here
Be the first to comment on "ಚೆಸ್ ಪ್ರತಿಭೆ ಯಶಸ್ವಿಗೆ ಅಂತಾರಾಷ್ಟ್ರೀಯ ಕೂಟದಲ್ಲಿ ಕಂಚಿನ ಪದಕ"