ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಹಗಲಿನ ಹೊತ್ತು ಕಡಿಮೆಯಾಗಿದ್ದರೂ ಸಂಜೆಯಾಗುತ್ತಿದ್ದಂತೆ ಬಿರುಸು ಪಡೆಯಿತು. ಬಂಟ್ವಾಳ ತಾಲೂಕಿನಾದ್ಯಂತ ಸಂಜೆಯ ಬಳಿಕ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯಿಂದಾಗಿ ಬಿ.ಸಿ.ರೋಡಿನ ತಲಪಾಡಿಯಲ್ಲಿ ವಾಣಿಜ್ಯ ಸಂಕೀರ್ಣವೊಂದಕ್ಕೆ ನೀರು ನುಗ್ಗಿದ್ದರೆ, ಕಲ್ಲಗುಡ್ಡೆ ಎಂಬಲ್ಲಿ ಗುಡ್ಡ ಜರಿದು ಮನೆಗೆ ಹಾನಿಯಾಗಿದೆ. ಕಸಬಾ ಗ್ರಾಮದ ಕಾಂಜಿರಕೋಡಿ ಎಂಬಲ್ಲಿ ಗುಡ್ಡ ಜರಿದು ಹೊಸ ರಸ್ತೆಗೆ ಹಾನಿ ಉಂಟಾಗಿದೆ.
ಕಲ್ಲಗುಡ್ಡೆ ನಿವಾಸಿ ಶೇಖ್ ಅಬ್ದುಲ್ ಶುಕೂರ್ ಎಂಬವರಿಗೆ ಸೇರಿದ ಮನೆಗೆ ಹಾನಿಯುಂಟಾಗಿದೆ. ಮನೆಯ ಮುಂಭಾಗದ ತಡೆಗೋಡೆಯೂ ಜರಿದಿದ್ದು, ಮೂರು ತೆಂಗಿನ ಮರಗಳು ಹಾಗೂ ಅಡಿಕೆ ಮರಗಳು ಅಪಾಯದಲ್ಲಿದೆ.ಘಟನಾ ಸ್ಥಳಕ್ಕೆ ಪುರಸಭಾ ಸದಸ್ಯ ಗಂಗಾಧರ್, ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಪುರಸಭಾ ವ್ಯಾಪ್ತಿಯ ವಾರ್ಡ್ 1ರಲ್ಲಿ ಬಾರೆಕಾಡು ಆಶ್ರಯ ಕೊಲನಿ, ಮಾದೇರಿ ಗುಡ್ಡೆ, ಕಾಂಜಿರಕೋಡಿ, ಅಗ್ರಾರ್‌ನ ಕಲ್ಲುರ್ಟಿ ದೇವಸ್ಥಾನ ಬಳಿ ಸಂಪರ್ಕಿಸುವ ಹೊಸ ರಸ್ತೆಯ ಮೇಲೆ ಗುರುವಾರ ಬೆಳಿಗ್ಗೆ ಪಕ್ಕದ ಗುಡ್ಡ ಜರಿದು ಬಿದ್ದಿದ್ದು, ಜನಸಂಚಾರಕ್ಕೆ ತೊಂದರೆಯಾಗಿದೆ.
ಇತ್ತೀಚೆಗಷ್ಟೇ ಸ್ಥಳೀಯ ಸದಸ್ಯ ವಾಸುಪೂಜಾರಿ ಅವರ ಮುತುವರ್ಜಿಯಿಂದ ಈ ಹೊಸ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೀಗ ಪಕ್ಕದ ಗುಡ್ಡ ಜರಿದು ಬಿದ್ದ ಪರಿಣಾಮ ರಸ್ತೆ ಸಂಪೂರ್ಣ ಹಾನಿಗೀಡಾಗಿದೆ. ಸುದ್ದಿ ತಿಳಿದ ಸದಸ್ಯ ವಾಸುಪೂಜಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಜನರ ಸಂಚಾರಕ್ಕೆ ಬದಲಿ ರಸ್ತೆಯನ್ನು ಬಳಸುವಂತೆ ಅವರು ಸೂಚಿಸಿದ್ದಾರೆ. ಈ ಬಗ್ಗೆ ಪುರಸಭೆಗೂ ಮಾಹಿತಿ ನೀಡಿದ್ದಾರೆ.
ಮನೆಗಳಿಗೆ ಹಾನಿ:
ಇರ್ವತ್ತೂರು ಗ್ರಾಮದ ಬಿ.ಎಸ್ ನಗರದ ಫೈರೋಝ್ ಎಂಬವರ ಮನೆಯ ಒಂದು ಪಾರ್ಶ್ವ ಕುಸಿದು ಬಿದ್ದಿದ್ದು, ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ವಿಟ್ಲ ಕಸಬಾದ ನಿಡ್ಯ ಎಂಬಲ್ಲಿ ಬಾಬು ಪೂಜಾರಿ ಅವರ ಮನೆಪಕ್ಕದ ತಡೆಗೋಡೆ ಹಾಗೂ ಗುಡ್ಡ ಜರಿದು ಹಾನಿ ಸಂಭವಿಸಿದ್ದು, ಸುಮಾರು 50 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕುಕ್ಕಿಪ್ಪಾಡಿ ಗ್ರಾಮದ ಆರಂಬೋಡಿ ಎಂಬಲ್ಲಿನ ಬಸ್ ತಂಗುದಾಣದ ಛಾವಣಿ ಸಂಪೂರ್ಣವಾಗಿ ಹಾರಿ ಹೋಗಿದ್ದು, ಅಲ್ಲೇ ನಿಂತಿದ್ದ ದಿನೇಶ್ ಎಂಬಾತನಿಗೆ ಸಣ್ಣಪುಟ್ಟ ಗಾಯ ಉಂಟಾದ ಬಗ್ಗೆ ವರದಿಯಾಗಿದೆ.
ಮನೆಗಳಿಗೆ-ತೋಟಕ್ಕೆ ಹಾನಿ:
ಕಳೆದ ಮೂರು ದಿನಗಳಲ್ಲಿ ಸುರಿದ ಗಾಳಿ-ಮಳೆಗೆ ಬಂಟ್ವಾಳ, ವಿಟ್ಲ ವ್ಯಾಪ್ತಿಗಳಲ್ಲಿ ಮನೆ ಹಾಗೂ ತೋಟಕ್ಕೆ ಹಾನಿಯಾದ ಬಗ್ಗೆ ಗುರುವಾರ ವರದಿಯಾಗಿದೆ.ಮಾಣಿಲ ಗ್ರಾಮದ ಐತ ಕೊರಗ ಎಂಬವರ ಮನೆಗೆ ಹಾನಿಯಾಗಿದ್ದು, ಸುಮಾರು 13 ಸಾವಿರ ನಷ್ಟ, ಕನ್ಯಾನ ಗ್ರಾಮದ ನಿವಾಸಿಗಳಾದ ನಾರಾಯಣ ಮೂಲ್ಯ, ಮುಹಮ್ಮದ್, ಸೋಮಪ್ಪ ಅವರ ಮನೆಗಳಿಗೆ ಹಾನಿಯಾಗಿದ್ದು, ತಲಾ 15 ಸಾವಿರದಷ್ಟು ನಷ್ಟ, ಉಳಿ ಗ್ರಾಮದ ನಿವಾಸಿಗಳಾದ ಕೊರಗಪ್ಪ ಪೂಜಾರಿ ಎಂಬವರ ತೋಟಕ್ಕೆ ಹಾನಿ, ಅಬ್ಬಾಸ್ ಎಂಬವರ ಮನೆಗೆ ಹಾನಿಯಾಗಿ, ನಷ್ಟ ಸಂಭವಿಸಿದೆ.
Be the first to comment on "ಧಾರಾಕಾರ ಮಳೆಗೆ ಹಲವೆಡೆ ತೊಂದರೆ: ಕಲ್ಲಗುಡ್ಡೆಯಲ್ಲಿ ಗುಡ್ಡ ಜರಿದು ಮನೆಗೆ ಹಾನಿ"