ಮೂಲರಪಟ್ನದಲ್ಲಿ ಸೋಮವಾರ ಸಂಜೆ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳವಾರ ಬೆಳಗ್ಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಜೊತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಬದಲಿ ವ್ಯವಸ್ಥೆಗಳನ್ನು ಏರ್ಪಡಿಸಲು ಸೂಚಿಸಿದ್ದಾರೆ. ಅದರಂತೆ ಸೇತುವೆಯ ಎರಡೂ ಭಾಗಗಳ ಯಾವುದೇ ನಾಗರಿಕರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ, ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸೇತುವೆ ಕುಸಿತದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎರಡು ತಾಲೂಕುಗಳ ಸಂಪರ್ಕ ಇದರಿಂದ ಕಡಿದಿದೆ. ಆದರೆ ಇಂದು ಬೆಳಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಪಿಡಬ್ಲುಡಿ ಇಂಜಿನಿಯರುಗಳಾದ ಉಮೇಶ್ ಭಟ್, ಗೋಕುಲ್ ದಾಸ್, ರವಿಕುಮಾರ್ ಜೊತೆ ಮಾತನಾಡಿದ್ದು, ಅಲ್ಲೇ ಸನಿಹದಲ್ಲಿ ಇರುವ ತೂಗುಸೇತುವೆಯಲ್ಲಿ ತಾತ್ಕಾಲಿಕವಾಗಿ ಕಾಲ್ನಡಿಗೆಯಲ್ಲಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ ಶಾಸಕರು, ತೂಗುಸೇತುವೆಗೆ ಹೋಗುವ ದಾರಿಯಲ್ಲಿರುವ ಕಳೆಗಿಡಗಳನ್ನು ತೆಗೆಯಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ರಸ್ತೆಯನ್ನು ದುರಸ್ತಿ ಮಾಡಿಕೊಡಲಾಗುತ್ತಿದೆ. ಆದರೆ ಇಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕೇವಲ ಕಾಲ್ನಡಿಗೆಯಲ್ಲಷ್ಟೇ ತೆರಳಲು ಸಾಧ್ಯ ಎಂದರು. ಭೇಟಿ ಸಂದರ್ಭ ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ ಜಗದೀಶ ಆಳ್ವ, ಮಂಗಳೂರು ತಾಪಂ ಸದಸ್ಯ ನಾಗೇಶ್ ಶೆಟ್ಟಿ, ಪ್ರವೀಣ್ ಆಳ್ವ, ದೇವಪ್ಪ ಪೂಜಾರಿ, ಉಮೇಶ ಅರಳ, ಎಂ.ಬಿ.ಅಶ್ರಫ್, ಎಂ.ಎಸ್.ಮಹಮ್ಮದ್, ಬಿ.ಎಂ.ಲತೀಫ್ ಮೊದಲಾದವರು ಉಪಸ್ಥಿತರಿದ್ದರು.
ಹೊಸ ಸೇತುವೆ ನಿರ್ಮಾಣ:
ಮಳೆಗಾಲ ಕಳೆದ ಕೂಡಲೇ ಮೂಲರಪಟ್ನದಲ್ಲಿ ಹೊಸ ಸೇತುವೆಯನ್ನು ನಿರ್ಮಿಸಲಾಗುವುದು. ಈ ಕುರಿತು ಸಂಸದರು ಸೂಚನೆಯನ್ನೂ ನೀಡಿದ್ದಾರೆ. ನಬಾರ್ಡ್ ಯೋಜನೆಯಡಿ ಸೇತುವೆ ನಿರ್ಮಿಸುವ ಚಿಂತನೆ ಇದೆ. ಇದರ ಅಂದಾಜುಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ನಾಯ್ಕ್ ಹೇಳಿದರು.
ಜನರಿಗೆ ತೊಂದರೆಯಾಗದಂತೆ ಕ್ರಮ:
ಸೇತುವೆ ಕುಸಿದ ಹಿನ್ನೆಲೆಯಲ್ಲಿ ಮೂಲರಪಟ್ನ ಮತ್ತು ಮುತ್ತೂರು ಭಾಗಗಳ ಜನರು ಪರಸ್ಪರ ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳಿಗೆ ಸಂಚರಿಸಲು ಅನುಕೂಲವಾಗಲು ಕ್ರಮ ಕಲ್ಪಿಸಲಾಗುವುದು. ಎರಡೂ ಬದಿ ಬಸ್ಸುಗಳು ಬರುವಂತೆ ವ್ಯವಸ್ಥೆ ಮಾಡಲಾಗುವುದು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಆರ್ ಟಿಒ, ಜಿಪಂ ಇಒ ಸಹಿತ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಂಸದರು ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಿದಂತೆ ಈ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ತೂಗುಸೇತುವೆಯಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ಬಂದು, ಎರಡೂ ಬದಿ ವಾಹನಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು. ಈ ಭಾಗ ದ್ವೀಪದಂತಾಗುವುದಾಗಲೀ, ಜನರಿಗೆ ಯಾವುದೇ ಸೌಕರ್ಯ ಇಲ್ಲದಂತಾಗುವ ಪ್ರಶ್ನೆಯೇ ಇರುವುದಿಲ್ಲ. ಈ ತಾತ್ಕಾಲಿಕ ವ್ಯವಸ್ಥೆಗೆ ಎಲ್ಲರೂ ಸಹಕರಿಸಬೇಕು ಎಂದು ರಾಜೇಶ್ ನಾಯ್ಕ್ ಹೇಳಿದರು.
ತೂಗುಸೇತುವೆ ಬದಿ ಇರುವ ಮೋರಿಯನ್ನು ದುರಸ್ತಿಗೊಳಿಸಲಾಗುತ್ತಿದೆ. ತಾತ್ಕಾಲಿಕವಾಗಿ ತೂಗುಸೇತುವೆಯನ್ನು ಉಪಯೋಗಿಸುವ ಕಾರಣ ಇದರ ಮೇಲೆ ಕಡ್ಡಾಯವಾಗಿ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ. ತೂಗುಸೇತುವೆಯಲ್ಲಿ ಒಮ್ಮೆಗೆ 25 ಮಂದಿಗಷ್ಟೇ ನಡೆದುಕೊಂಡು ಹೋಗಲು ಅವಕಾಶವಿರುತ್ತದೆ. ದ್ವಿಚಕ್ರವಾಹನಗಳ ನಿರ್ಬಂಧಿಸಲಾಗುವುದು. ಶಾಲಾ ಮಕ್ಕಳು ಮತ್ತು ಸ್ಥಳೀಯರಿಗೆ ಹೋಗಲಷ್ಟೇ ಅವಕಾಶವಿರುತ್ತದೆ. ಕಾವಲು ಕಾಯಲು ಬಂಟ್ವಾಳ, ಬಜಪೆ ಪೊಲೀಸರ ನಿಯೋಜನೆ ಮಾಡಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.
ಆತಂಕ ಬೇಡ. ರಸ್ತೆಯ ಇಕ್ಕೆಲಗಳಿಗೂ ಬಸ್ಸು ಎಂದಿನಂತೆಯೇ ಬರುತ್ತವೆ. ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲೇ ಜನರನ್ನು ಹತ್ತಿಸಿ ತಿರುಗಿ ಹೋಗುತ್ತವೆ. ಈ ಕುರಿತು ಸಂಸದರು ಆರ್. ಟಿ.ಒ.ಗೆ ಸೂಚನೆ ನೀಡಿದ್ದಾರೆ ಎಂದು ನಾಯ್ಕ್ ಹೇಳಿದರು. ಈ ಸಂದರ್ಭ ದೇವದಾಸ ಶೆಟ್ಟಿ, ಪುರುಷ ಸಾಲಿಯಾನ್, ರಮಾನಾಥ ರಾಯಿ, ಸಂತೋಷ್ ರಾಯಿಬೆಟ್ಟು ಇದ್ದರು.
Be the first to comment on "ಆತಂಕ ಬೇಡ, ಬದಲಿ ವ್ಯವಸ್ಥೆಗೆ ಸರ್ವ ಕ್ರಮ –ರಾಜೇಶ್ ನಾಯ್ಕ್"