ಶುಕ್ರವಾರ ರಾತ್ರಿ ಬಿ.ಸಿ.ರೋಡಿನ ಬ್ರಹ್ಮಶ್ರಿ ನಾರಾಯಣಗುರು ವೃತ್ತದ ಸಮೀಪ ಹೊಂಡಾ ಆಕ್ಟಿವಾ ಮತ್ತು ಆಕ್ಸೆಸ್ ವಾಹನಗಳೆರಡು ಪರಸ್ಪರ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಮಂಗಳೂರು ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಯಶವಂತ ಆಚಾರ್ಯ (48) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನ ಹೊಂದಿದ್ದಾರೆ.
ಪತ್ನಿ, ಓರ್ವ ಪುತ್ರ, ತಂದೆ, ತಾಯಿ ಮತ್ತು ಅಪಾರ ಬಂಧು ಬಳಗ ಹಾಗೂ ಶಿಷ್ಯಸಮೂಹವನ್ನು ಅವರು ಅಗಲಿದ್ದಾರೆ.
ಬಿ.ಸಿ.ರೋಡ್‌ನಿಂದ ಬಂಟ್ವಾಳ ಪೇಟೆಯ ಕಡೆಗೆ ಯಶವಂತ ಆಚಾರ್ಯ ಅವರು ತಮ್ಮ ವಾಹನದಲ್ಲಿ ಸಾಗುತ್ತಿದ್ದ ಸಂದರ್ಭ, ಬೆಳ್ತಂಗಡಿ ಕಡೆಯಿಂದ ರಿಚರ್ಡ್ ಕೊರೆಯ ಅವರ ಸ್ಕೂಟರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 7.30 ಕ್ಕೆ ಅಪಘಾತ ನಡೆದಿದ್ದು, ಕೂಡಲೇ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು, ಆಚಾರ್ಯ ಅವರ ಎಡಕೆನ್ನೆ, ತಲೆ, ಕೈಕಾಲಿಗೆ ಗಂಭೀರ ಗಾಯಗಳಾಗಿದ್ದವು. ಇನ್ನೋರ್ವ ಗಾಯಾಳು ರಿಚರ್ಡ್ ಕೊರೆಯ ಅವರೂ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಶವಂತ ಆಚಾರ್ಯ ಅವರು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಗಣಿತ ಉಪನ್ಯಾಸಕರಾಗಿ ಹಲವಾರು ಅಭಿಮಾನಿ ಶಿಷ್ಯ ಸಮೂಹವನ್ನು ಹೊಂದಿದ್ದರು. ಬಳಿಕ ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯಕ್ಕೆ ಸೇರಿದ್ದರು. ಉತ್ತಮ ಭಜಕರೂ ಆಗಿರುವ ಅವರು ಬಂಟ್ವಾಳದ ಗೀತಾಂಜಲಿ ಭಜನಾ ಮಂಡಳಿಯ ಸದಸ್ಯರಾಗಿದ್ದರು. ಅವರು ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರಾರ್ಥನೆ, ಭಜನೆಗಳ ಮೂಲಕ ದೇವರಲ್ಲಿ ಮೊರೆ ಹೋಗಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರು ಹುಟ್ಟುಹಬ್ಬ ಆಚರಿಸಿದ್ದರು.
ಯಶವಂತ ಆಚಾರ್ಯ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಂದು ರಾತ್ರಿ 9 ಗಂಟೆಗೆ ಮೃತರ ಬಿ.ಸಿ.ರೋಡಿನ ಕೈಕುಂಜೆಯ ಸ್ವಗೃಹಕ್ಕೆ ತರಲಾಗುವುದು ಎಂದು ಅವರ ಆತ್ಮೀಯ ಬಳಗ ಮಾಹಿತಿ ನೀಡಿದೆ.
ಬಿ.ಸಿ.ರೋಡ್ ಸರ್ಕಲ್ ನಲ್ಲಿ ಅಪಘಾತ: ಗಂಭೀರ ಸ್ಥಿತಿಯಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲು
Be the first to comment on "ರಸ್ತೆ ಅಪಘಾತ, ಗಾಯಾಳು ಪ್ರೊಫೆಸರ್ ಯಶವಂತ ಆಚಾರ್ಯ ಇನ್ನಿಲ್ಲ"