www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಅತ್ತಾವರದ ಆಸ್ಪತ್ರೆಗೆ ವಾಹನದಲ್ಲಿ ತೆರಳುವಾಗ ಜಾಗ್ರತೆ, ಅಲ್ಲಿ ಪಾರ್ಕಿಂಗ್ ಜಾಗವಿಡೀ ಮುಳುಗಿದೆ. ಸಣ್ಣ ರಸ್ತೆಗಳ ಚರಂಡಿಗಳು ಯಾವುದು, ರಸ್ತೆ ಯಾವುದು ಗೊತ್ತಾಗುವುದಿಲ್ಲ. ನೀರು ತೋಡಿನಲ್ಲಿ ಹರಿದಂತೆ ಕಾಣಿಸುತ್ತಿದೆ.
ಮಂಗಳೂರಿಗೆ ಏನಾದರೂ ಅಗತ್ಯವಿದ್ದರೆ ಮಾತ್ರ ಇವತ್ತು ಬನ್ನಿ. ಪಡೀಲ್ ಅಂಡರ್ ಪಾಸ್ ಸಮುದ್ರದಂತಾಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲವೊಂದು ವಾಹನಗಳು ಬಂದ್ ಬಿದ್ದಿವೆ. ಚಲಾಯಿಸಲೂ ಆಗದಂಥ ಸ್ಥಿತಿ.
ಮಂಗಳೂರಿನ ಟಿಎಂಎ ಪೈ ಹಾಲ್ ಪಕ್ಕದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಚ್ಚರ, ದೊಡ್ಡ ತೋಡು ಉಕ್ಕಿ ಹರಿದಿದೆ. ನೀರು ಹೊಳೆಯಂತೆ ರಸ್ತೆಯಲ್ಲಿದೆ. ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗುವುದು ಬಿಡಿ, ದೊಡ್ಡವರಿಗೂ ನಡೆಯಲು ಕಷ್ಟ!!!
ಮಂಗಳವಾರ ಮಧ್ಯಾಹ್ನವಾಗುತ್ತಿದ್ದಂತೆ ವಾಟ್ಸಾಪ್, ಫೇಸ್ ಬುಕ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸಂದೇಶಗಳು, ಹೊಳೆಯಂತಾಗಿರುವ ಮಂಗಳೂರಿನ ರಸ್ತೆಗಳು, ವಿಡಿಯೋಗಳು ಹರಿದಾಡುತ್ತಿವೆ. ಹಾಗೆ ನೋಡಿದರೆ ಮಂಗಳೂರಿನಲ್ಲಿ ಇಂಥದ್ದೊಂದು ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದನ್ನು ಸಾಮಾಜಿಕ ಕಳಕಳಿ ಇರುವ ಹೋರಾಟಗಾರರು, ಜಾಗೃತ ನಾಗರಿಕರು ಎಚ್ಚರಿಸುತ್ತಲೇ ಬಂದಿದ್ದರು.
ಚರಂಡಿಗಳು ಹೂಳೆತ್ತದೇ ಇರುವುದು, ಸಮುದ್ರಕ್ಕೆ ನೀರು ಹೋಗದೇ ಇರುವುದು, ಕಂಡಕಂಡಲ್ಲಿ ಕಟ್ಟಡಗಳು ಏಳುತ್ತಿರುವುದು, ವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸದೇ ಇರುವುದು ಕೃತಕ ನೆರೆ ಉದ್ಭವವಾಗಲು ಹೀಗೆ ನೂರೆಂಟು ಕಾರಣಗಳನ್ನು ನೀಡಲಾಗುತ್ತಿದೆ.
2015ನೇ ಇಸವಿಯಲ್ಲಿ ಭಾರತದ ಮಹಾನಗರಗಳಲ್ಲಿ ಒಂದಾದ ಚೆನ್ನೈನಲ್ಲಿ ಭಾರಿ ಪ್ರಮಾಣದ ಪ್ರವಾಹ, ಕೃತಕ ನೆರೆ ಉಂಟಾಗಿ ಹಲವು ಪ್ರಾಣಾಪಾಯಗಳಿಗೂ ಕಾರಣವಾಗಿತ್ತು. ಇದೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯೂ ಆಗಿತ್ತು.
ಚೆನ್ನೈ ರೀತಿಯಲ್ಲಿ ಅಡ್ಡಡ್ಡವಾಗಿ ಬೆಳೆಯುತ್ತಿರುವ ಮಂಗಳೂರು ಕೂಡ ಇಂಥದ್ದೇ ಒಂದು ಸಮಸ್ಯೆಗೀಡಾಗುವ ಅಪಾಯಕ್ಕೆ ಮೈಯೊಡ್ಡಿದೆ. ಮಂಗಳೂರಿನಲ್ಲಿ ನೀರು ಭೂಮಿಯೊಳಗೆ ಇಂಗಲು ಕಾಂಕ್ರೀಟ್ ಅಡ್ಡಿಯಾಗುತ್ತಿದೆ. ನೀರು ಹರಿದುಹೋಗಲು ಯಾವುದೇ ವ್ಯವಸ್ಥೆಗಳು ಇಲ್ಲ. ಸಮುದ್ರ ಪಕ್ಕದಲ್ಲಿದ್ದರೂ ಮಳೆನೀರು ಸಮುದ್ರಕ್ಕೂ ಸೇರೋದಿಲ್ಲ, ಭೂಮಿಯೊಳಗೂ ಹೋಗೋದಿಲ್ಲ ಎಂದಾದ ಮೇಲೆ ಏನು ಮಾಡುವುದು?
ಜಾತಿ, ಜಾತಿಗಳ ನಡುವೆ ಜಗಳ, ಧರ್ಮ, ಧರ್ಮಗಳ ನಡುವೆ ಒಡಕು ಮೂಡಿಸುವ ಸಂದೇಶಗಳು, ರಾಜಕೀಯ ಪಕ್ಷಗಳ ಭಿನ್ನ ಸಿದ್ಧಾಂತಗಳನ್ನು ಲೇವಡಿ ಮಾಡುವ ಸಂದೇಶಗಳನ್ನು ಹರಡುವ ಜನರು ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ, ಇಂಥ ಸನ್ನಿವೇಶಗಳು ಎದುರಾದಾಗ ಏನು ಮಾಡುವುದು ಹಾಗೂ ಇಂಥ ಸನ್ನಿವೇಶಗಳು ಬಾರದಂತೆ ಹೇಗೆ ಜಾಗರೂಕತೆ ವಹಿಸುವುದು?
ಆದರೆ ದುರದೃಷ್ಟವಶಾತ್ ಇಷ್ಟೊಂದು ಭಾರಿ ಮಳೆಗೆ ಕೃತಕ ನೆರೆಯಿಂದಾಗಿ ತೊಂದರೆಗಳು ಆಗುತ್ತಿದ್ದರೂ ಕೆಲವರು ಮೊಬೈಲ್ ನಲ್ಲಿ ಫೊಟೋ ಕ್ಲಿಕ್ಕಿಸಿ ಆಡಳಿತವನ್ನೋ, ತಮಗಾಗದವರು ಇದಕ್ಕೆ ಹೊಣೆಗಾರರು ಎಂಬುದಾಗಿ ದೂರುತ್ತಿದ್ದಾರೆ. ಸ್ವಯಂಸೇವಾ ಸಂಸ್ಥೆಗಳು ಈಗ ಸ್ಟೇಜ್ ಕಾರ್ಯಕ್ರಮಗಳಿಂದ ಹೊರಬಂದು, ಜನರ ಕಷ್ಟಗಳಿಗೆ ಸ್ಪಂದಿಸಲು ಈಗ ಸಕಾಲ.
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)