ಬಿ.ಸಿ.ರೋಡ್ ನಲ್ಲಿ ಬಸ್ ಗೆ ಕಾಯುವುದು ಎಲ್ಲಿ?

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

  • ಬಿ.ಸಿ.ರೋಡ್ ನಿಂದ ನೀವು ಮಂಗಳೂರಿಗೆ ಹೋಗುವುದಾದರೆ ಬಸ್ ಗೆ ಎಲ್ಲಿ ನಿಲ್ಲುತ್ತೀರಿ?
  • ಬಿ.ಸಿ.ರೋಡಿನಿಂದ ಧರ್ಮಸ್ಥಳಕ್ಕೆ ಹೋಗುವುದಾದರೆ ಎಲ್ಲಿ ಬಸ್ಸಿಗೆ ಕಾಯುತ್ತೀರಿ?
  • ಬಿ.ಸಿ.ರೋಡಿನಿಂದ ಪುತ್ತೂರಿಗೆ ಹೋಗುವುದಾದರೆ ಎಲ್ಲಿ ನೀವು ಬಸ್ಸನ್ನು ಹುಡುಕುತ್ತೀರಿ?
  • ಬಿ.ಸಿ.ರೋಡಿನಿಂದ ಮೈಸೂರು- ಬೆಂಗಳೂರಿಗೆ ಸಂಸಾರ ಸಮೇತ ಬಸ್ಸಿನಲ್ಲಿ ಹೋಗುವುದಾದರೆ ಲಗ್ಗೇಜಿನೊಂದಿಗೆ ಮಳೆ ಬರುವಾಗ ಎಲ್ಲಿ ನಿಲ್ಲುತ್ತೀರಿ?

ಪರಸ್ಪರ ಟೀಕೆ, ಪ್ರಮಾಣ, ಸಾಧನೆಯ ಘೋಷಣೆ, ಪ್ರಚಾರ ಮಾಡಿಕೊಂಡ ರಾಜಕಾರಣಿಗಳು ಈ ವಿಚಾರದಲ್ಲಿ ಹಲವಾರು ವರ್ಷಗಳಿಂದ ಉತ್ತರ ನೀಡದ ಪ್ರಶ್ನೆಗಳಿವು.

ಹಾಗಾದರೆ ಬಿ.ಸಿ.ರೋಡಿನಲ್ಲಿ ಬಸ್ ನಿಲ್ದಾಣಗಳು ಇಲ್ಲವೇ. ಇವೆ. (ಅದೂ ಒಂದಕ್ಕಿಂತ ಹೆಚ್ಚು. ಮತ್ತೊಂದು ನಿರ್ಮಾಣ ಹಂತದಲ್ಲಿದೆ) ಆದರೆ ಅವ್ಯಾವುದೂ ಸಾರ್ವಜನಿಕರಿಗೆ ಅರ್ಥಾತ್ ಪ್ರಯಾಣಿಕರಿಗೆ ಉಪಯೋಗಕ್ಕಿಲ್ಲ.  ಕಾಂಗ್ರೆಸ್ ಮತ್ತು ಬಿಜೆಪಿಯವರು ತಮ್ಮ ಸಾಧನೆಗಳ ಪಟ್ಟಿಯಲ್ಲಿ ಈ ಬಸ್ ನಿಲ್ದಾಣಗಳನ್ನು ಸೇರಿಸಿದ್ದಾರೆ. ಪುರಸಭೆ ಆಡಳಿತ ಇದ್ದ ಸಂದರ್ಭ ವಾಣಿಜ್ಯ ಸಂಕೀರ್ಣ ಕಟ್ಟಿ ಅಲ್ಲಿ ಮೂಡುಬಿದಿರೆ, ಕಾರ್ಕಳ, ಮುಡಿಪು ಬಸ್ಸುಗಳು ನಿಲ್ಲಲು ಜಾಗ ಮಾಡಿಕೊಟ್ಟು, ಪ್ರಯಾಣಿಕರು ಅಂಗಡಿ ಬಾಗಿಲಿನ ಎದುರು ನಿಲ್ಲುವಂತೆ ಮಾಡಿದ್ದನ್ನು ಸಾಧನೆ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಅಲ್ಲೇ ಪಕ್ಕ ಧರ್ಮಸ್ಥಳ, ಪುತ್ತೂರು, ವಿಟ್ಲ ಕಡೆಗಳಿಗೆ ಹೋಗುವ ಬಸ್ ಪ್ರಯಾಣಿಕರಿಗೆ ಗತಿಯೇ ಇಲ್ಲ. ಆ ಕಟ್ಟಡ ಅವರಿಗೆ ಉಪಯೋಗಕ್ಕೇ ಇದುವರೆಗೂ ದೊರಕಲಿಲ್ಲ. ಇದನ್ನು ತನ್ನ ಸಾಧನೆ ಎಂದು ರಾಜಕೀಯ ಪಕ್ಷವೊಂದು ಬೆನ್ನು ತಟ್ಟಿಕೊಂಡರೆ, ಈಗ ಖಾಸಗಿ ಬಸ್ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಮಾಡುತ್ತೇವೆ ಎಂದು ಹೇಳಿದ ಇನ್ನೊಂದು ರಾಜಕೀಯ ಪಕ್ಷ, ಆ ಪಿಪಿಪಿ ಮಾದರಿಯ ಬಸ್ ನಿಲ್ದಾಣದಲ್ಲಿ ಬಸ್ಸುಗಳೆಷ್ಟು ಬರಲು ಅವಕಾಶವಿದೆ, ಪ್ರಯಾಣಿಕರಿಗೆ ನಿಲ್ಲಲು ಎಷ್ಟು ಜಾಗ ಕಲ್ಪಿಸಲಾಗುತ್ತದೆ, ವಾಣಿಜ್ಯ ಸಂಕೀರ್ಣಕ್ಕೆ ಆದ್ಯತೆ ಎಷ್ಟಿದೆ ಎಂಬುದನ್ನು ಸ್ಪಷ್ಟಗೊಳಿಸಿಲ್ಲ. ಆದರೆ ಅಲ್ಲೂ ಪ್ರಯಾಣಿಕರಿಗೆ ಕೊನೇ ಅವಕಾಶ. ಇದಕ್ಕೆಲ್ಲ ಕಳಶವಿಟ್ಟಂತೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಅದೇ ಜಾಗ ಹುಡುಕಿಕೊಟ್ಟದ್ದು ನಾವು, ಅವರಲ್ಲ ಎಂದು ಒಂದು ಪಕ್ಷ, ಹಣ ಒದಗಿಸಿ ಕಟ್ಟಿಸಿದ್ದು ನಾವು ಎನ್ನಲು ಇನ್ನೊಂದು ಪಕ್ಷ ಪರಸ್ಪರ ಬೆನ್ನು ತಟ್ಟಲು ಪೈಪೋಟಿ ನಡೆಸಿದ್ದು ಬಿಟ್ಟರೆ, ಪ್ರಯಾಣಿಕರು ಯಾರೂ ಅಲ್ಲಿಗೆ ಕಾಲಿಡುತ್ತಿಲ್ಲ. ಕಟ್ಟಿ ಏಳು ತಿಂಗಳಾದರೂ ಅಲ್ಲಿ ಬಸ್ ಗಳನ್ನು ಬರುವಂತೆ ಮಾಡಬೇಕು ಎಂಬ ಇಚ್ಛಾಶಕ್ತಿಯೂ ಯಾವ ಜನಪ್ರತಿನಿಧಿಗಳಿಗೂ ಮೂಡಲು ಪುರುಸೊತ್ತಾಗಲಿಲ್ಲ. ಅದೇ ಬಸ್ ನಿಲ್ದಾಣದ ಎದುರು ಜನರು ಬಸ್ಸಿಗಾಗಿ ಕಾಯುತ್ತಿರುವುದು ದೊಡ್ಡ ದುರಂತ.! ಹಾಗಾದರೆ ಪ್ರಯಾಣಿಕರು ಎಲ್ಲಿ ನಿಲ್ಲುತ್ತಾರೆ?

ಮಳೆಯೇ ಇರಲಿ, ಬಿಸಿಲೇ ಇರಲಿ, ಚಳಿಯೇ ಇರಲಿ, ಬಿ.ಸಿ.ರೋಡಿನ ಪ್ರಯಾಣಿಕರಿಗೆ ಸರ್ವೀಸ್ ರಸ್ತೆಯ ಆರಂಭದ ಭಾಗ, ಸರ್ವೀಸ್ ರಸ್ತೆಯ ಅಂತ್ಯದ ಭಾಗ, ಫ್ಲೈಓವರ್ ಪಕ್ಕದ ಅಂಗಡಿ ಬುಡದಲ್ಲಿ ಮಂಗಳೂರಿಗೆ ತೆರಳುವ ಬಸ್ಸುಗಳನ್ನು ಕಾಯುವುದೇ ಇಷ್ಟವೋ ಅಥವಾ ಮಂಗಳೂರಿಗೆ ತೆರಳುವ ಬಸ್ಸುಗಳು ಅಲ್ಲೇ ಬಲವಂತವಾಗಿ ನಿಲ್ಲುತ್ತವೆಯೋ ಎಂಬುದು ಕೋಳಿಯಿಂದ ಮೊಟ್ಟೆ ಹೊರಗೆ ಬಂತೋ ಅಥವಾ ಮೊಟ್ಟೆಯಿಂದ ಕೋಳಿ ಬಂತೋ ಎಂಬಷ್ಟೇ ಜಟಿಲ. ಆದರೆ ಪ್ರಯಾಣಿಕರು ಈ ಜಾಗದಲ್ಲಿ ನಿಲ್ಲದಂತೆ ಅಥವಾ ಬಸ್ಸುಗಳು ಅಲ್ಲಿ ನಿಲ್ಲದಂತೆ ಮಾಡಲು ಆಡಳಿತಕ್ಕೆ ಸಾಧ್ಯವಿದೆ. ಅದಕ್ಕೊಂದು ಸೂಕ್ತ ಜಾಗವನ್ನೂ ಕಲ್ಪಿಸಲು ಅವಕಾಶವಿದೆ. ಆದರೆ ಎಲ್ಲವೂ ಜಾಣಕುರುಡು. ಕೆಎಸ್ಸಾರ್ಟಿಸಿ ಬಸ್ಸುಗಳು ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ಪ್ರಯಾಣಿಕರು ಬಸ್ಸುಗಳ ಸೀಟುಗಳನ್ನು ಅಲಂಕರಿಸಿ ಆಗಿರುತ್ತದೆ. ನಿಲ್ದಾಣದಲ್ಲಿ ಟಿಸಿಯ ಎಂಟ್ರಿಗಷ್ಟೇ ಅವಕಾಶ. ಖಾಸಗಿ ಬಸ್ಸುಗಳು ಕಾಂಟ್ರಾಕ್ಟ್ ಕ್ಯಾರೇಜ್ ಆದ ಕಾರಣ ಅವರು ನಿಂತಲ್ಲೇ ನಿಲ್ದಾಣ. ಯಾವುದೇ ಕಡಿವಾಣ ಅವರಿಗಿಲ್ಲ.

ಮಂಗಳೂರಿಗೆ ತೆರಳುವ ಪ್ರಯಾಣಿಕರು ಸಿಕ್ಕಿದಲ್ಲಿ ನಿಂತರೆ, ಧರ್ಮಸ್ಥಳ, ಪುತ್ತೂರು, ಚಿಕ್ಕಮಗಳೂರು, ಮಡಿಕೇರಿ, ಮೈಸೂರು, ಬೆಂಗಳೂರು ಕಡೆಗಳಿಗೆ ತೆರಳುವ ಪ್ರಯಾಣಿಕರಿಗೆ ಇನ್ನೂ ಸರಿಯಾದ ಸೂರು ನಿರ್ಮಾಣವಾಗಿಲ್ಲ. ಈಗಿನ ಬಸ್ ನಿಲ್ದಾಣ ಎಂಬ ಜಾಗದಲ್ಲಿ ಮೂಡುಬಿದಿರೆ, ಮುಡಿಪು ಸಹಿತ ಸ್ಥಳೀಯ ಬಸ್ಸುಗಳು ಪ್ರವೇಶಿಸುತ್ತವೆಯೇ ಹೊರತು ಅನ್ಯಬಸ್ಸುಗಳು ಬರುವುದಿಲ್ಲ. ಹೊಸದಾಗಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗುವ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಕಟ್ಟಡಕ್ಕೆ ಒತ್ತು ಜಾಸ್ತಿಯೇ ಹೊರತು, ಪ್ರಯಾಣಿಕರ ಹಿತಾಸಕ್ತಿ ಅದಕ್ಕಿಲ್ಲ. ಹೀಗಾಗಿ ಮುಂದಿನ ಮಳೆಗಾಲದಲ್ಲೂ ಪ್ರಯಾಣಿಕರು ಯಾರು ಬಂದರೂ ನಾವು ಇಲ್ಲೇ ನಿಲ್ಲಬೇಕು ಎಂಬ ಗೊಣಗಾಟದೊಂದಿಗೆ.ನರಕಯಾತನೆ ಅನುಭವಿಸಬೇಕು.

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಬಿ.ಸಿ.ರೋಡ್ ನಲ್ಲಿ ಬಸ್ ಗೆ ಕಾಯುವುದು ಎಲ್ಲಿ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*