www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಆರೋಪ, ಪ್ರತ್ಯಾರೋಪಗಳ ಸುದೀರ್ಘ ಭಾಷಣ ಬಳಿಕ ಪ್ರತಿಪಕ್ಷ ಬಿಜೆಪಿಯ ಶಾಸಕರು ಸಭಾತ್ಯಾಗ ನಡೆಸಿದ ಬಳಿಕ ವಿಧಾನಸಭೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದ ಕೆ.ಆರ್. ರಮೇಶ್ ಕುಮಾರ್ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭಿಸಿದರು. ಸರಕಾರದ ಪರ ಯಾರು ಯಾರು ಇದ್ದಾರೆಂದು ಕೇಳಿದಾಗ ಸದನದಲ್ಲಿದ್ದ ಎಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕೈ ಎತ್ತಿ ಬೆಂಬಲ ವ್ಯಕ್ತಪಡಿಸಿದರು. ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಜಯಗಳಿಸಿದರು. ಹೀಗೆ ಧ್ವನಿಮತದೊಂದಿಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸಂಪನ್ನಗೊಂಡಿತು.
ಹಾಗೆ ನೋಡಿದರೆ ಸ್ಪೀಕರ್ ಆಯ್ಕೆ ಸಂದರ್ಭವೇ ಈ ಸುಳಿವು ಲಭಿಸಿತ್ತು. ಮೊದಲು ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿಯ ಸುರೇಶ್ ಕುಮಾರ್ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಬಳಿಕ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರ ಸಭಾಧ್ಯಕ್ಷತೆಯಲ್ಲಿ ಕಲಾಪ ಆರಂಭಗೊಂಡಿತ್ತು. ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಸ್ಪೀಕರ್ ರಮೇಶ್ ಕುಮಾರ್ ಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ವಿಶ್ವಾಸಮತ ಯಾಚನೆ ಪ್ರಸ್ತಾಪದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಸುದೀರ್ಘವಾಗಿ ಭಾಷಣ ಮಾಡಿದರು. ಈ ಸಂದರ್ಭ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅದಾದ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕರಾಗಿ ನಿಯುಕ್ತಿಗೊಂಡ ಬಿಜೆಪಿ ಪ್ರಮುಖ ಬಿ.ಎಸ್.ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿಯವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದರು. ಜೆಡಿಎಸ್ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ 24ಗಂಟೆಯೊಳಗೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ ಸಾಲಮನ್ನಾ ಮಾಡಬೇಕು, ಇಲ್ಲದಿದ್ದರೆ ಸೋಮವಾರ ಕರ್ನಾಟಕ ಬಂದ್ ನಡೆಸುವುದಾಗಿ ಘೋಷಿಸಿದರು.
ಜನರ ಮುಂದೆ ಇತಿಹಾಸ ಕೆದಕಿದ ರಾಜಕಾರಣಿಗಳು:
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಸಂದರ್ಭ ಬಿ.ಎಸ್.ಯಡಿಯೂರಪ್ಪ ಅವರನ್ನು ತೀವ್ರವಾಗಿ ಟೀಕಿಸಿದರು. ಈ ಸಂದರ್ಭ ಯಡಿಯೂರಪ್ಪ ಅವರೂ ಕುಮಾರಸ್ವಾಮಿಯವರನ್ನು ಕಟುವಾಗಿ ಟೀಕಿಸಿದರು. ಈ ಸಂದರ್ಭ ಒಂದು ಹಂತದಲ್ಲಿ ವೈಯಕ್ತಿಕ ಟೀಕೆಗಳೂ ಬಂದವು. ರೈತ ಸಾಲ ಮನ್ನಾ ತಕ್ಷಣ ಮಾಡಿ. ಇಲ್ಲದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡ್ತೇವೆ ಎಂದು ಯಡಿಯೂರಪ್ಪ ಗುಡುಗಿದರು.
ಯಡಿಯೂರಪ್ಪ ಈ ಹೇಳಿಕೆ ಭಾರೀ ರಾಜಕೀಯ ಲೆಕ್ಕಾಚಾರಗಳಿಗೆ ನಾಂದಿ ಹಾಡಿದ್ದು, ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತಷ್ಟು ಒತ್ತಡ ಬಿದ್ದಿದೆ.
Be the first to comment on "ಬಿಜೆಪಿ ಸಭಾತ್ಯಾಗದ ಬಳಿಕ ವಿಶ್ವಾಸಮತ ಗೆದ್ದ ಕುಮಾರಸ್ವಾಮಿ"