www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕಾಲ ಬದಲಾಗಿದೆ. ಜನಸಂಖ್ಯೆ ಹೆಚ್ಚಾಗಿದೆ. ವಾಹನಗಳಲ್ಲಿ ಓಡಾಡುವವರು ಜಾಸ್ತಿಯಾಗುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ನಡೆದುಕೊಂಡು ಹೋಗುವವರು ಇಲ್ಲವೇ?
ಇದ್ದಾರೆ. ಆದರೆ ಹೈಟೆಕ್ ಸಿಟಿಗಳನ್ನು ನೋಡಿದರೆ ಅವರ ಹಕ್ಕುಗಳ ಧ್ವನಿ ಕ್ಷೀಣವಾಗುತ್ತಿದೆಯೇ ಎಂಬಂತೆ ಭಾಸವಾಗುತ್ತದೆ. ಇನ್ನು ಪುರಸಭೆ ವ್ಯಾಪ್ತಿಗೆ ಬಂದರಂತೂ ಪಾದಚಾರಿಗಳನ್ನು ಕೇಳುವವರೇ ಇಲ್ಲ. ಬಂಟ್ವಾಳದಲ್ಲಿ ಪರಿಸ್ಥಿತಿ ಅದಕ್ಕೆ ದೊಡ್ಡ ಉದಾಹರಣೆ.
ಇಡೀ ಬಂಟ್ವಾಳ, ಬಿ.ಸಿ.ರೋಡ್, ಪಾಣೆಮಂಗಳೂರು ಪೇಟೆಗಳಲ್ಲಿ ನೀವು ಅಡ್ಡಾಡಿದರೆ, ಪಾದಚಾರಿಗಳಿಗೆ ಅಲ್ಲಿ ಸ್ಕೋಪ್ ಇಲ್ಲವೇ ಇಲ್ಲ. ಯಾವ ಬದಿಯಲ್ಲಿ ನೋಡಿದರೂ ಫುಟ್ ಪಾತ್ ಕಾಣಲು ಸಿಗುವುದೇ ಇಲ್ಲ. ಬಂಟ್ವಾಳ ಪೇಟೆ ಮತ್ತು ಪಾಣೆಮಂಗಳೂರು ಪೇಟೆಯಂತೂ ಶತಮಾನದಷ್ಟು ಹಿಂದಿನ ಸ್ಥಿತಿಯಲ್ಲಿ ಇದ್ದಂತಿದೆ. ಹಾಗೆಂದು ಹೊಚ್ಚ ಹೊಸ ವಾಹನಗಳು ಓಡಾಡುತ್ತವೆ, ರಸ್ತೆ ಮಾತ್ರ ಎತ್ತಿನಗಾಡಿ ಓಡಿಸಲು ಲಾಯಕ್ಕಾಗಿರುವಂತಿದೆ!
ಬಂಟ್ವಾಳ, ಬಿ.ಸಿ.ರೋಡ್ ಪೇಟೆಗಳಲ್ಲಿ ನಡೆದುಕೊಂಡು ಹೋಗುವುದೇ ದೊಡ್ಡ ಸವಾಲು. ಈಗ ನಿರ್ಮಾಣಗೊಂಡಿರುವ ಸರ್ವೀಸ್ ರಸ್ತೆ ಇರಬಹುದು ಅಥವಾ ಬಂಟ್ವಾಳ ಪೇಟೆಯ ಅಗಲಕಿರಿದಾದ ರಸ್ತೆ ಇರಬಹುದು, ಎಲ್ಲೂ ನಡೆಯುವವರಿಗೆ ನಿರ್ಭೀತಿಯಿಂದ ಹೆಜ್ಜೆ ಹಾಕುವ ಸ್ವಾತಂತ್ರ್ಯವೇ ಇಲ್ಲ.
ಘನ ವಾಹನಗಳು ಹಾರ್ನ್ ಹಾಕುತ್ತಾ ಎಲ್ಲರನ್ನೂ ಬೆದರಿಸುತ್ತಾ ಸಾಗಿದರೆ ಸ್ಕೂಟರ್ ಸವಾರರೂ ಕಕ್ಕಾಬಿಕ್ಕಿಯಾಗಿಬಿಡುತ್ತಾರೆ. ರಸ್ತೆ ಬದಿಯ ಅಂಗಡಿಗಳಿಗೆ ವ್ಯಾಪಾರಕ್ಕೆ ಬರುವವರಷ್ಟೇ ಅಲ್ಲ, ಯಾರ್ಯಾರೋ ಅಲ್ಲೇ ತಮ್ಮ ಕಾರು, ಸ್ಕೂಟರ್ ಪಾರ್ಕ್ ಮಾಡಿ ಟ್ರಾಫಿಕ್ ಜಾಮ್ ಗೆ ತಮ್ಮ ಪಾಲು ನೀಡುತ್ತಾರೆ. ಪ್ರಶ್ನಿಸಲು ಹೋದವರನ್ನೇ ಕೇಳಲು ನೀವ್ಯಾರು ಎಂದು ಮರುಪ್ರಶ್ನೆ ಎಸೆದದ್ದೂ ಉಂಟು. ಮೃತ್ಯು ಯಾವ ಕಡೆ ಕಾದು ಕುಳಿತಿರುತ್ತದೆ ಎಂದು ಊಹಿಸಲೂ ಅಸಾಧ್ಯ. ಇದರಿಂದ ತೀವ್ರ ತೊಂದರೆಗೆ ಒಳಗಾಗುವವರು ಹಿರಿಯ ನಾಗರಿಕರು.
ಎಲ್ಲೆಲ್ಲಿ ಸಮಸ್ಯೆ:
ಕೆಲವು ಜಾಗಗಳನ್ನು ಹೊರತುಪಡಿಸಿ, ಇಡೀ ಬಂಟ್ವಾಳ, ಬಿ.ಸಿ.ರೋಡ್ ಗಳಲ್ಲಿ ಈ ಸಮಸ್ಯೆ ಇದೆ. ಬಡ್ಡಕಟ್ಟೆ, ಜಕ್ರಿಬೆಟ್ಟು, ಬಂಟ್ವಾಳ ಪೇಟೆ, ಬಂಟ್ವಾಳ ಪುರಸಭೆಯ ಎದುರು, ಪೊಲೀಸ್ ಠಾಣೆ ಎದುರು, ಬಿ.ಸಿ.ರೋಡಿನ ಸರ್ವೀಸ್ ರಸ್ತೆ, ಕೈಕುಂಜೆ ರಸ್ತೆ, ಸಂಚಯಗಿರಿ ರಸ್ತೆಗಳ ಸಹಿತ ಹಲವು ರಸ್ತೆಗಳಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಸರಿಯಾದ ಜಾಗವೇ ಇಲ್ಲ.
ಈಗಾಗಲೇ ಪಾದಚಾರಿಗಳು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ವೇಗವಾಗಿ ದ್ವಿಚಕ್ರ ಸಹಿತ ಘನ ವಾಹನಗಳು ಬಂದಾಗ ಪಕ್ಕಕ್ಕೆ ಸರಿದು ನಿಲ್ಲಲೂ ಜಾಗವಿಲ್ಲದಂಥ ಪರಿಸ್ಥಿತಿ ಇದೆ. ಅಂಗಡಿ, ಮುಂಗಟ್ಟುಗಳ ಮಾಡು ಮುಂದೆ ಇದ್ದರಂತೂ ರಸ್ತೆ ಪಕ್ಕ ನಡೆದುಕೊಂಡು ಹೋಗುವುದೂ ತ್ರಾಸದಾಯಕ.
ಸರ್ವೀಸ್ ರಸ್ತೆ ಸುಮಾರು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ಹಾಕುವ ಮೂಲಕ ಅಭಿವೃದ್ಧಿಗೊಂಡಿದೆ. ರಸ್ತೆಯನ್ನು ಜನರಿಗೆ ಅನುಕೂಲವಾಗುವಂತೆ ಅಗಲಗೊಳಿಸುತ್ತೇವೆ ಎಂದು ಘೋಷಿಸಲಾಗಿತ್ತು. ಕಾಮಗಾರಿ ನೋಡಿದರೆ ಫುಟ್ ಪಾತ್ ಕಾಣಿಸುತ್ತಲೇ ಇಲ್ಲ.
ಕೆಲ ಭಾಗಗಳಲ್ಲಿ ಚರಂಡಿ ಇದ್ದ ಜಾಗದಲ್ಲಿ ಸ್ಲ್ಯಾಬ್ ಗಳನ್ನು ಹಾಕಿ ಅದನ್ನೇ ಫುಟ್ ಪಾತ್ ಎಂದು ಬಿಂಬಿಸಲಾಗಿದೆ. ಆದರೆ ಆ ಜಾಗದಲ್ಲಿ ದ್ವಿಚಕ್ರವೋ ಅಥವಾ ಚತುಷ್ಚಕ್ರದ ವಾಹನಗಳೇನಾದರೂ ಬಂದು ನಿಂತರೆ ನಡೆಯುವುದೂ ಕಷ್ಟ.
Be the first to comment on "ಬಿ.ಸಿ.ರೋಡ್, ಬಂಟ್ವಾಳದಲ್ಲಿ ಹೇಗೆ ನಡ್ಕೊಂಡು ಹೋಗ್ತೀರಿ?"